ಶಿವಮೊಗ್ಗ: ಇತ್ತೀಚೆಗೆ ಹೆಚ್ಚು ಮಂದಿ ಅರಣ್ಯ ಪ್ರದೇಶಕ್ಕೆ ತೆರಳಿ ಮೋಜು, ಮಸ್ತಿ, ಪಾರ್ಟಿ ಹೆಸರಿನಲ್ಲಿ ಕುಣಿದು ಕುಪ್ಪಳಿಸುತ್ತ ಅರಣ್ಯದ ನೈಜ ಸ್ವರೂಪವನ್ನೇ ಹಾಳುಗೆಡವುತ್ತಿದ್ದಾರೆ. ಇದನ್ನು ಅರಿತ ಶಿವಮೊಗ್ಗದ ಕೆಲ ಪರಿಸರಾಸಕ್ತ ಸಂಘಟನೆಗಳು ಅರಣ್ಯ ಸ್ವಚ್ಛತಾ ಕಾರ್ಯಕ್ಕೆ ಮುಂದಾಗಿವೆ.
ಹೌದು, ರಸ್ತೆಯಂಚಿನ ಅರಣ್ಯ ಭಾಗದುದ್ದಕ್ಕೂ ಪ್ಲಾಸ್ಟಿಕ್, ಖಾಲಿ ಬಾಟಲ್ಗಳು ಕಣ್ಣಿಗೆ ರಾಚುತ್ತವೆ. ಇದನ್ನರಿತ ಶಿವಮೊಗ್ಗದ ಕೆಲವು ಸಂಘಟನೆಗಳು ಅಭಯಾರಣ್ಯದಲ್ಲಿ ಸ್ವಚ್ಛತಾ ಕಾರ್ಯವನ್ನು ನಡೆಸಿವೆ. ಶಿವಮೊಗ್ಗದ ಬಜಾಜ್ ಕಂಪನಿಯ ತಂಡದೊಂದಿಗೆ ಶಿವಮೊಗ್ಗ ಗ್ರೀನ್ ಲೈವ್ಸ್, ನೇಚರ್ ಫಸ್ಟ್ ಸಂಘಟನೆ ಕೈಜೋಡಿಸಿ, ಅರಣ್ಯವನ್ನು ಸ್ವಚ್ಛಗೊಳಿಸಿವೆ.
ಶಿವಮೊಗ್ಗ - ತೀರ್ಥಹಳ್ಳಿ ರಾಷ್ಟ್ರೀಯ ಹೆದ್ದಾರಿಯ 19ನೇ ಮೈಲಿಕಲ್ಲು ಬಳಿ ಸಿಂಗನಬಿದರೆ ಗ್ರಾಮಕ್ಕೆ ಹೋಗುವ ಮಾರ್ಗದ ಎರಡು ಬದಿ ಸುಮಾರು ಅರ್ಧ ಕಿ.ಮೀ ದೂರದ ವರೆಗೆ ಸ್ವಚ್ಛತಾ ಕಾರ್ಯ ನಡೆಸಲಾಗಿದ್ದು, ಸುಮಾರು 2 ಲೋಡ್ಗೂ ಅಧಿಕ ಪ್ಲಾಸ್ಟಿಕ್ ಹಾಗೂ ಖಾಲಿ ಮದ್ಯದ ಬಾಟಲಿಗಳನ್ನು ಸಂಗ್ರಹಿಸಿದ್ದಾರೆ. ಮಾತ್ರವಲ್ಲದೇ ಹೆದ್ದಾರಿ ಪಕ್ಕದಲ್ಲಿನ ಗ್ರಾಮದ ಬಸ್ ನಿಲ್ದಾಣವನ್ನು ಸ್ವಚ್ಛಗೊಳಿಸಿ, ಬಣ್ಣ ಬಳಿದು ಹೊಸ ರೂಪ ನೀಡಿದ್ದಾರೆ.
ಒಟ್ಟಿನಲ್ಲಿ ಮೋಜು-ಮಸ್ತಿ ಮಾಡಿ ಅರಣ್ಯ ನಾಶ ಮಾಡುವವರ ನಡುವೆ ಶಿವಮೊಗ್ಗದ ಕೆಲ ಪರಿಸರಾಕ್ತರ ತಂಡ ಅರಣ್ಯದೊಳಗೆ ಹೋಗಿ ಸ್ವಚ್ಛತಾ ಕಾರ್ಯ ನಡೆಸಿರುವುದು ನಿಜಕ್ಕೂ ಶ್ಲಾಘನೀಯ.