ಶಿವಮೊಗ್ಗ : ಜಗತ್ ಪ್ರಸಿದ್ಧ ಜೋಗ ಜಲಪಾತಕ್ಕೆ ಕೋವಿಡ್ ನಿಯಮಾವಳಿಗಳನ್ನು ಉಲ್ಲಂಘಿಸಿ ಪ್ರವಾಸಿಗರಿಗೆ ಪ್ರವೇಶ ನೀಡುತ್ತಿದ್ದ ಸ್ಥಳೀಯ ಏಳು ಜನರ ವಿರುದ್ಧ ಜೋಗ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಜೋಗ ಪ್ರವಾಸಿ ತಾಣವಾದ ಕಾರಣ ಇಲ್ಲಿಗೆ ಬರುವ ಪ್ರವಾಸಿಗರಿಂದ ಕೋವಿಡ್ ಹರಡಬಹುದು ಎಂಬ ಉದ್ದೇಶದಿಂದ ಜಿಲ್ಲಾಧಿಕಾರಿಗಳು ಜೋಗಕ್ಕೆ ಬರುವ ಪ್ರವಾಸಿಗರಿಗೆ ಎರಡು ಡೋಸ್ ಕೋವಿಡ್ ವ್ಯಾಕ್ಸಿನ್ ಹಾಕಿಸಿಕೊಂಡಿರಬೇಕು ಹಾಗೂ ಕನಿಷ್ಟ 72 ಗಂಟೆಯ ಆರ್ಟಿಪಿಸಿಆರ್ ವರದಿ ಹೊಂದಿರಬೇಕೆಂದು ಕಡ್ಡಾಯ ಮಾಡಿದ್ದರು.
ಆದರೆ, ಈ ವರದಿ ಉಲ್ಲಂಘಿಸಿ ಪ್ರವಾಸಿಗರಿಗೆ ಅಕ್ರಮವಾಗಿ ಪ್ರವೇಶ ನೀಡುತ್ತಿದ್ದ ಸ್ಥಳೀಯರಾದ ಚಂದ್ರಶೇಖರ್, ಮಂಜುನಾಥ್, ಕೃಷ್ಣಪ್ಪ, ಮಂಜುನಾಥ, ರಾಕೇಶ್, ಪ್ರಭುದಾಸ್ ಹಾಗೂ ಸಂಜಯ್ ಎಂಬುವರ ವಿರುದ್ಧ ಜೋಗ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಲಾಗಿದೆ. ಸಾಗರದ ಡಿವೈಎಸ್ಪಿ ತಂಡ ದಾಳಿ ನಡೆಸಿದೆ ಎನ್ನಲಾಗಿದೆ.