ಶಿವಮೊಗ್ಗ: ತಂದೆಯ ಆಸ್ತಿಗಾಗಿ ಮಕ್ಕಳು ಜಗಳವಾಡುವುದು ಸರ್ವೆ ಸಾಮಾನ್ಯ. ಆದರೆ, ಇಲ್ಲೋರ್ವ ಪಾಪಿ ತಂದೆ ಮಗನ ಆಸ್ತಿ ಮೇಲೆ ಕಣ್ಣು ಹಾಕಿ, ಆತನಿಗೆ ಚಾಕುವಿನಿಂದ ಇರಿದಿರುವ ಘಟನೆ ಹೊಸನಗರ ಪಟ್ಟಣದಲ್ಲಿ ನಡೆದಿದೆ.
ತೀರ್ಥೇಶ್ ಹೊಸನಗರ ತಾಲೂಕು ಗೊರಗೋಡು ಗ್ರಾಮದ ನಿವಾಸಿ. ರಾಜಪ್ಪ ಗೌಡ ಎಂಬುವವರಿಗೆ ತೀರ್ಥೇಶ್ ಹಾಗೂ ವಿರೇಶ್ ಎಂಬ ಇಬ್ಬರು ಮಕ್ಕಳಿದ್ದರು. ರಾಜಪ್ಪ ಗೌಡ ಮೊದಲ ಪತ್ನಿ ತೊರೆದು ಎರಡನೇ ಮದುವೆಯಾಗಿದ್ದು, ಮೊದಲನೇ ಪತ್ನಿಯ ಮಕ್ಕಳಾದ ತೀರ್ಥೇಶ್ ಹಾಗೂ ವೀರೇಶ್ರವರನ್ನು ಬಿಟ್ಟು ಹೋಗುತ್ತಾರೆ.
ತಂದೆ ತಮ್ಮನ್ನು ಬಿಟ್ಟು ಹೋದಾಗ ಸ್ವಲ್ಪ ಜಮೀನು ಇರುತ್ತದೆ. ಈ ಜಮೀನಿನಲ್ಲಿ ತೀರ್ಥೇಶ್ ಅಡಿಕೆ ತೋಟ ಮಾಡುತ್ತಾರೆ. ನಂತರ ತಮ್ಮ ದುಡಿಮೆಯಲ್ಲಿ ಜಮೀನು ಖರೀದಿ ಮಾಡುತ್ತಾರೆ. ಇದೇ ವೇಳೆ ತಮ್ಮ ತಾಯಿ ಹಾಗೂ ತಮ್ಮನನ್ನು ತೀರ್ಥೇಶ್ ನೋಡಿಕೊಳ್ಳುತ್ತಿದ್ದಾರೆ. ರಾಜಪ್ಪ ಗೌಡ ಎರಡನೇ ಮದುವೆಯಾಗಿ ಮೈಸೂರಿನ ಹೋಟೆಲ್ನಲ್ಲಿ ಕೆಲಸ ಮಾಡಿಕೊಂಡಿರುತ್ತಾರೆ. ಎರಡನೇ ಪತ್ನಿ ಸಾವನ್ನಪ್ಪಿದ್ದರಿಂದ ದಾರಿ ಇಲ್ಲದೆ ಮೊದಲನೇ ಹೆಂಡತಿ ಮಕ್ಕಳ ಬಳಿ ಬರುತ್ತಾರೆ. ಈ ವೇಳೆ ತಮ್ಮೊಂದಿಗೆ ಇರುವುದು ಬೇಡ ಎಂದ ಮಕ್ಕಳು, ನಂತರ ಒಪ್ಪಿಕೊಂಡು ತಮ್ಮ ಬಳಿಯೇ ಇರಲು ಅನುಮತಿ ನೀಡುತ್ತಾರೆ.
ಇದನ್ನೂ ಓದಿರಿ: ಚಿನ್ನ ಕಳ್ಳತನ ಮಾಡಿರುವ ಆರೋಪದಡಿ ವಿಚಾರಣೆ... ಮನನೊಂದು ಆತ್ಮಹತ್ಯೆಗೆ ಶರಣಾದ ಕೆಲಸದಾಕೆ
ಈ ನಡುವೆ ರಾಜಪ್ಪ ಗೌಡ ತನಗೆ ಆಸ್ತಿಯಲ್ಲಿ ಪಾಲು ಮಾಡಿ ಎಂದಾಗ ಮಕ್ಕಳು ನೀನು ಮನೆ ಬಿಟ್ಟು ಹೋದಾಗ ಇದ್ದ ಭತ್ತದ ಗದ್ದೆ ಇದೆ ತೆಗೆದುಕೊಳ್ಳಿ ಎಂದು ಹೇಳುತ್ತಾರೆ. ಇದಕ್ಕೆ ಒಪ್ಪದ ಆತ, ಗ್ರಾಮದ ಹಿರಿಯರೊಡನೆ ಪಂಚಾಯತಿ ನಡೆಸಿದಾಗ, ಅವರು ಸಹ ನಿಮ್ಮ ಭೂಮಿ ನೀನು ತೆಗೆದುಕೊಳ್ಳಿ ಎಂದಿದ್ದಾರೆ. ಇದರಿಂದ ಕೋಪಗೊಂಡ ರಾಜಪ್ಪ ಗೌಡ ಹೊಸನಗರ ಪೊಲೀಸ್ ಠಾಣೆಗೆ ಬಂದು ದೂರು ನೀಡಿದ್ದಾನೆ. ಪೊಲೀಸರು ಇದು ಭೂ ವ್ಯಾಜ್ಯವಾದ ಕಾರಣ ಕೋರ್ಟ್ಗೆ ಹೋಗಿ ಎಂದಿದ್ದಾರೆ.
ಮಗನ ಕೊಲೆ ಮಾಡಲು ನಿರ್ಧರಿಸಿದ ತಂದೆ
ಆಸ್ತಿಯಲ್ಲಿ ಪಾಲು ಪಡೆದುಕೊಳ್ಳಲು ಹಠಕ್ಕೆ ಬಿದ್ದ ರಾಜಪ್ಪ ಗೌಡ ಸ್ವಂತ ಮಗನನ್ನೆ ಕೊಲೆ ಮಾಡಲು ನಿರ್ಧರಿಸುತ್ತಾನೆ. ಮಗ ತೀರ್ಥೇಶ್ ನನ್ನು ಹಿಂಬಾಲಿಸಿ ಕೊಂಡು ಬಂದು ಆತನಿಗೆ ಚಾಕುವಿನಿಂದ ಇರಿದಿದ್ದಾನೆ. ಆದರೆ, ತೀರ್ಥೇಶ್ ಆಯಸ್ಸು ಗಟ್ಟಿ ಇದ್ದ ಕಾರಣ ಸಣ್ಣ ಗಾಯಗಳೂಂದಿಗೆ ಪ್ರಾಣಾಪಾಯದಿಂದ ಪಾರಾಗಿದ್ದಾನೆ. ಸದ್ಯ ತೀರ್ಥೇಶ್ ಜೀವಕ್ಕೆ ಯಾವುದೇ ಹಾನಿಯಾಗಿಲ್ಲ. ಈ ಕುರಿತು ಹೊಸನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಆರೋಪಿ ರಾಜಪ್ಪ ಗೌಡರನ್ನು ಬಂಧಿಸಿದ್ದಾರೆ.