ಶಿವಮೊಗ್ಗ: ಶಿವಮೊಗ್ಗ ಮಹಾನಗರ ಪಾಲಿಕೆ ಹಾಗೂ ಸ್ಮಾರ್ಟ್ ಸಿಟಿ ಲಿಮಿಟೆಡ್ ವತಿಯಿಂದ ನಿರ್ಮಾಣವಾಗಿರುವ ವಿವಿಧ ಕಾಮಗಾರಿಗಳ ಉದ್ಘಾಟನೆ ಹಾಗೂ ಶಂಕುಸ್ಥಾಪನೆಯನ್ನು ಡಿಸೆಂಬರ್ 29 ರಂದು ನಡೆಯಲಿದೆ ಎಂದು ಜಿಲ್ಲಾ ಉಸ್ತುವಾರಿ ಸಚಿವ ಕೆ.ಎಸ್.ಈಶ್ವರಪ್ಪ ತಿಳಿಸಿದ್ದಾರೆ.
ಸ್ಮಾರ್ಟ್ ಸಿಟಿ ಕಚೇರಿಯಲ್ಲಿ ಮಾತನಾಡಿದ ಅವರು, ಬಿ.ಎ.ಬಸವರಾಜಪ್ಪ ಕಾರ್ಯಕ್ರಮಕ್ಕೆ ಆಗಮಿಸಿ, ಉದ್ಘಾಟನೆ ಮಾಡಲಿದ್ದಾರೆ. ಸ್ಮಾರ್ಟ್ ಸಿಟಿಯಿಂದ ಶಿವಮೊಗ್ಗ ನಗರವ್ಯಾಪ್ತಿಯ 45 ಸರ್ಕಾರಿ ಶಾಲೆಗಳ ಸ್ಮಾರ್ಟ್ ಎಜುಕೇಶನ್ ಕಾಮಗಾರಿಗೆ 8.50 ಕೋಟಿ ರೂ., ಮಾಸ್ತಾಂಬಿಕ ಪಾರ್ಕ್ ಅಭಿವೃದ್ದಿಗೆ 1.55 ಕೋಟಿ ರೂ., ಸಿಮ್ಸ್ ಕಾಲೇಜಿಗೆ ಉಪಕರಣಗಳ ಖರೀದಿಗೆ 50 ಲಕ್ಷ, ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಇಲಾಖೆಗೆ ಪರಿಕರಗಳನ್ನು ಒದಗಿಸಲು 1 ಕೋಟಿ ರೂ. ನಿಗದಿ ಮಾಡಲಾಗಿದೆ ಎಂದರು.
ಸ್ಮಾರ್ಟ್ ಸಿಟಿ ವತಿಯಿಂದ ಯೋಗ ಭವನ, ಶಿವಮೊಗ್ಗ ಖಾಸಗಿ ಬಸ್ ನಿಲ್ದಾಣ ಸುಂದರೀಕರಣ, ಸಿಮ್ಸ್ ಬೋಧನಾಸ್ಪತ್ರೆ ಮೆಡಿಕಲ್ ಕಾಲೇಜಿನ ಉಳಿದ ಕಾಮಗಾರಿ, ಹೊಳೆ ಬಸ್ ನಿಲ್ದಾಣ ಅಭಿವೃದ್ದಿ ಸೇರಿದಂತೆ ಒಟ್ಟು 19.48 ಕೋಟಿ ರೂ. ವೆಚ್ಚದ ಕಾಮಗಾರಿಗಳು ನಡೆಯುತ್ತವೆ. ಹಾಗೆಯೇ ಮಹಾತ್ಮ ಗಾಂಧಿ ನಗರ ವಿಕಾಸ ಯೋಜನೆಯಡಿ 137 ಕಾಮಗಾರಿಗಳಿಗೆ ಶಂಕುಸ್ಥಾಪನೆ ಮಾಡಲಾಗುವುದು ಎಂದರು.