ಶಿವಮೊಗ್ಗ: ಕೊಲೆಯಾದ ಭಜರಂಗದಳದ ಕಾರ್ಯಕರ್ತ ಹರ್ಷ ಅವರ ಮನೆಗೆ ಮಹಾನಗರ ಪಾಲಿಕೆಯ ಬಿಜೆಪಿ ಸದಸ್ಯರು ಭೇಟಿ ನೀಡಿ ಕುಟುಂಬಕ್ಕೆ ಸಾಂತ್ವನ ಹೇಳಿದ್ದಾರೆ. ಹರ್ಷ ಅವರ ಹತ್ಯೆಯಾದ ದಿನದಂದು ಪಾಲಿಕೆಯ ಎಲ್ಲ ಸದಸ್ಯರು ದೆಹಲಿ ಹಾಗೂ ರಾಜಸ್ಥಾನದ ಪ್ರವಾಸದಲ್ಲಿದ್ದರು. ಪ್ರವಾಸ ಮುಗಿಸಿ ವಾಪಸ್ ಬಂದ ಸದಸ್ಯರು ಹರ್ಷನ ಮನೆಗೆ ತೆರಳಿ ಸಾಂತ್ವನ ಹೇಳಿದ್ದಾರೆ.
ಮಹಾನಗರ ಪಾಲಿಕೆಯ ಮೇಯರ್ ಸುನೀತ ಅಣ್ಣಪ್ಪನವರ ನೇತೃತ್ವದಲ್ಲಿ ಭೇಟಿ ನೀಡಿದ ಬಿಜೆಪಿ ಸದಸ್ಯರು ತಮ್ಮ ಒಂದು ತಿಂಗಳ ವೇತನ ನೀಡಿದ್ದಾರೆ. ಎಲ್ಲ ಬಿಜೆಪಿ ಸದಸ್ಯರ ಒಂದು ತಿಂಗಳ ವೇತನ ಸುಮಾರು 1 ಲಕ್ಷ 82 ಸಾವಿರ ರೂ ಆಗುತ್ತದೆ. ಇದರಲ್ಲಿ1 ಲಕ್ಷ ರೂ ಗಳನ್ನು ಹರ್ಷನ ಕುಟುಂಬಕ್ಕೆ ನೀಡಿದ್ದು, ಉಳಿದ 82 ಸಾವಿರ ರೂಗಳನ್ನು ಹಿಂದು ಸುರಕ್ಷಾ ನಿಧಿಗೆ ನೀಡಲಾಗಿದೆ ಎಂದು ಹೇಳಲಾಗಿದೆ.
ಪಾಲಿಕೆಯ ಉಪ ಮೇಯರ್ ಶಂಕರ್ ರವರು ಹರ್ಷನ ಮನೆಯ ವಾರ್ಡ್ ಸದಸ್ಯರಾಗಿದ್ದು, ಹರ್ಷನ ಕೊಲೆ ಹಾಗೂ ನಂತರ ನಡೆದ ಗಲಾಟೆ ಸಂದರ್ಭದಲ್ಲಿ ಉಪ ಮೇಯರ್ ಇಲ್ಲದೇ ಇರುವುದಕ್ಕೆ ಸ್ಥಳೀಯರು ಆಕ್ರೋಶ ಹೊರ ಹಾಕಿದ್ದರು. ಇದರಿಂದ ಪ್ರವಾಸ ಮುಗಿಸಿದ ಬಿಜೆಪಿ ಸದಸ್ಯರು ಹರ್ಷನ ಮನೆಗೆ ಭೇಟಿ ನೀಡಿದ್ದಾರೆ.