ಶಿವಮೊಗ್ಗ: ಜಿಲ್ಲೆಯಲ್ಲಿ ರೈಲುಗಳ ಸಂಖ್ಯೆ ಏನೋ ಹೆಚ್ಚಿತ್ತು. ಆದರೆ, ರೈಲ್ವೆ ಮೇಲ್ಸೇತುವೆಗಳು ಇಲ್ಲದಿರುವುದರಿಂದ ಜನರು ಸಾಕಷ್ಟು ಕಿರಿಕಿರಿ ಅನಿಭವಿಸುತ್ತಿದ್ದರು. ಇದನ್ನು ಮನಗಂಡ ಸಂಸದ ಬಿ.ವೈ. ರಾಘವೇಂದ್ರ ರೈಲ್ವೆ ಮೇಲ್ಸೇತುವೆಗಳನ್ನು ಮಂಜೂರು ಮಾಡಿಸುವಲ್ಲಿ ಯಶಸ್ವಿಯಾಗಿದ್ದು, ರೈಲ್ವೆ ಮೇಲ್ಸೇತುವೆಗಳ ನಿರ್ಮಾಣ ಕಾರ್ಯಕ್ಕೆ ಸಿಎಂ ಯಡಿಯೂರಪ್ಪ ಅವರ ಉಪಸ್ಥಿತಿಯಲ್ಲಿ ಕೇಂದ್ರ ರೈಲ್ವೆ ಸಚಿವ ಪಿಯುಷ್ ಗೋಯಲ್ ವರ್ಚುವಲ್ ಮೂಲಕ ಶಂಕುಸ್ಥಾಪನೆ ನೆರವೇರಿಸಿದ್ದಾರೆ.
ನಗರದ ಮಧ್ಯ ಭಾಗದಲ್ಲೇ ರೈಲ್ವೆ ಹಳಿ ಹಾದುಹೋಗಿರುವುದರಿಂದ ಟ್ರಾಫಿಕ್ ಜಾಮ್ ಉಂಟಾಗುತ್ತಿತ್ತು. ಹೀಗಾಗಿ, ಶಿವಮೊಗ್ಗದಲ್ಲಿ ರೈಲ್ವೆ ಮೇಲ್ಸೇತುವೆ ನಿರ್ಮಿಸಬೇಕೆಂಬ ಕೂಗು ಹಲವು ವರ್ಷಗಳಿಂದ ಕೇಳಿಬಂದಿತ್ತು. ಇದೀಗ ಶಿವಮೊಗ್ಗಕ್ಕೆ ಮೂರು ರೈಲ್ವೆ ಮೇಲ್ಸೇತುವೆಗಳು ಹಾಗೂ ಒಂದು ಕೆಳಸೇತುವೆ ಮಂಜೂರಾಗಿವೆ.
ನಗರದ ಸವಳಂಗ ರಸ್ತೆ, ಕಾಶಿಪುರ ಗೇಟ್ನಲ್ಲಿ ರೈಲ್ವೆ ಮೇಲ್ಸೇತುವೆಗಳು ನಿರ್ಮಾಣಗೊಳ್ಳಲಿದ್ದು, ಇದರೊಂದಿಗೆ ಭದ್ರಾವತಿ ಹೊರವಲಯದ ಕಡದಕಟ್ಟೆಯಲ್ಲಿ ಒಂದು ಮೇಲ್ಸೇತುವೆ ನಿರ್ಮಾಣವಾಗಲಿದೆ. 116.31 ಕೋಟಿ ರೂಪಾಯಿ ವೆಚ್ಚದಲ್ಲಿ ರೈಲ್ವೆ ಮೇಲ್ಸೇತುವೆಗಳು ನಿರ್ಮಾಣಗೊಳ್ಳಲಿವೆ. ಈ ಮೇಲ್ಸೇತುವೆಗಳ ನಿರ್ಮಾಣ ಕಾರ್ಯವನ್ನು 16 ತಿಂಗಳ ಒಳಗಾಗಿ ಮುಗಿಸುವಂತೆ ಸಂಬಧಿಸಿದ ಗುತ್ತಿಗೆದಾರರಿಗೆ ಗಡುವನ್ನೂ ಸಹ ನೀಡಲಾಗಿದೆ.
ಒಟ್ಟಾರೆ, ರೈಲ್ವೆ ಮೇಲ್ಸೇತುವೆಗಳ ನಿರ್ಮಾಣಕ್ಕೆ ಶಂಕುಸ್ಥಾಪನೆ ನೆರವೇರಿಸಿರುವುದು ಶಿವಮೊಗ್ಗ ಜನರ ಸಂತಸಕ್ಕೆ ಕಾರಣವಾಗಿದೆ.