ಶಿವಮೊಗ್ಗ: ಶಿಕ್ಷಣದೊಂದಿಗೆ ಸನ್ನಡತೆ, ಸದ್ಭಾವನೆ, ಶಿಸ್ತು, ಪ್ರೀತಿ ಮತ್ತು ಸೇವಾ ಮನೋಭಾವನೆ ಕಲಿಸಿದ್ದಲ್ಲಿ ವಿದ್ಯಾರ್ಥಿಗಳು ಸುಸಂಸ್ಕೃತ ನಾಗರಿಕರಾಗುತ್ತಾರೆ ಎಂದು ಜಿಲ್ಲಾಕಾರಿ ಕೆ.ಎ. ದಯಾನಂದ್ ಹೇಳಿದ್ದಾರೆ.
ನಗರದ ಸ್ಕೌಟ್ ಭವನದಲ್ಲಿ ಏರ್ಪಡಿಸಿದ್ದ ಭಾರತ್ ಸ್ಕೌಟ್ಸ್ ಮತ್ತು ಗೈಡ್ಸ್ ಕರ್ನಾಟಕ ಜಿಲ್ಲಾ ಸಂಸ್ಥೆಯ ಶತಮಾನೋತ್ಸವ ಸಂಭ್ರಮ ಮತ್ತು ಜಿಲ್ಲಾ ಮಟ್ಟದ ಕಬ್ ಮತ್ತು ಬುಲ್ಬುಲ್ಗಳ ಪದಕ ತರಬೇತಿ ಶಿಬಿರವನ್ನು ಉದ್ಘಾಟಿಸಿ ಮಾತನಾಡಿದ ಅವರು, ಸ್ಕೌಟ್ಸ್ ನಿಂದ ಮಕ್ಕಳಿಗೆ ಸಮಾಜ ಸೇವೆ ಮಾಡುವುದನ್ನು ಕಲಿಸಲಾಗುತ್ತದೆ. ಶ್ರದ್ಧೆ, ಶಿಸ್ತುವಿನಂತಹ ವಿಷಯಗಳನ್ನು ಮಕ್ಕಳಿಗೆ ತಿಳಿಸಿಕೊಡುವ ಮೂಲಕ ಸ್ವಯಂ ಸೇವಕ ಸಂಸ್ಥೆಯಾಗಿ ಕೆಲಸ ನಿರ್ವಹಿಸುತ್ತಿದೆ ಎಂದು ಶ್ಲಾಘಿಸಿದರು.
ಮಕ್ಕಳಿಗೆ ಸ್ವಮನಸ್ಸಿನಿಂದ ಸೇವೆಗೈಯುವ ಮನೋಭಾವನೆ ಬೆಳೆಸುವಂತ ಕೆಲಸ ಸ್ಕೌಟ್-ಗೈಡ್ಸ್‌ನಿಂದ ಆಗುತ್ತಿದೆ. ಮಕ್ಕಳು ಹೊರ ಜಗತ್ತಿನೊಂದಿಗೆ ಸಹಜವಾಗಿ ಬೆರೆಯುವಂತಹ, ಎಲ್ಲರೊಂದಿಗೂ ಹೊಂದಾಣಿಕೆ ಮಾಡಿಕೊಳ್ಳುವಂತಹ ಗುಣಗಳನ್ನು ಇಂತಹ ಚಟುವಟಿಕೆಯಲ್ಲಿ ಭಾಗಿಯಾಗುವ ಮೂಲಕ ಬೆಳೆಸಿಕೊಳ್ಳುತ್ತಿದ್ದಾರೆ ಎಂದರು.
ಸಂಸ್ಥೆಯ ಜಿಲ್ಲಾ ಮುಖ್ಯ ಆಯುಕ್ತ ಎಚ್.ಡಿ. ರಮೇಶ್ ಶಾಸ್ತ್ರಿ ಮಾತನಾಡಿ, ಜಿಲ್ಲಾ ಸಂಸ್ಥೆಗೆ ನೂರು ವರ್ಷಗಳು ತುಂಬಿದೆ. ಈ ಸಂಸ್ಥೆಯ ಬೆಳವಣಿಗೆಯಲ್ಲಿ ಸಾಕಷ್ಟು ಗಣ್ಯರುಗಳ ಪರಿಶ್ರಮ ಅಡಗಿದೆ. ಮಕ್ಕಳು ಕೇವಲ ಪಠ್ಯಕ್ರಮದ ಕಲಿಕೆಗೆ ಸೀಮಿತವಾಗಿರದೆ, ಪಠ್ಯೇತರ ಚಟುವಟಿಕೆಯಲ್ಲೂ ಭಾಗಿಯಾಗಬೇಕು ಎಂದರು.