ಶಿವಮೊಗ್ಗ: ಪ್ರಧಾನಿ ನರೇಂದ್ರ ಮೋದಿ ನೇತೃತ್ವದಲ್ಲಿ ಕೇಂದ್ರದ ಎನ್ಡಿಎ ಸರ್ಕಾರ ದೇಶವನ್ನು ಅಭಿವೃದ್ಧಿ ಪಥದಲ್ಲಿ ಕರೆದೊಯ್ಯುತ್ತಿದೆ ಎಂದು ಸಂಸದ ಬಿ.ವೈ. ರಾಘವೇಂದ್ರ ಅಭಿಪ್ರಾಯಪಟ್ಟರು.
ಪತ್ರಿಕಾ ಭವನದಲ್ಲಿ ಪ್ರೆಸ್ಟ್ರಸ್ಟ್ ಆಯೋಜಿಸಿದ್ದ ಮಾಧ್ಯಮ ಸಂವಾದದಲ್ಲಿ ಮಾತನಾಡಿದ ಅವರು, ಕೇಂದ್ರದಲ್ಲಿ ಬಿಜೆಪಿ ಎರಡನೇ ಬಾರಿ ಅಧಿಕಾರಕ್ಕೆ ಬಂದು ವರ್ಷ ಪೂರ್ಣಗೊಂಡಿದೆ. ದೇಶದ ಎಲ್ಲೆಡೆ ಸಾಕಷ್ಟು ಅಭಿವೃದ್ಧಿ ಕಾರ್ಯಗಳು ನಡೆದಿವೆ. ಜಗತ್ತಿನಲ್ಲಿ ಕೊರೊನಾ ವೈರಸ್ ಸಾಕಷ್ಟು ಸಂಕಷ್ಟ ತಂದೊಡ್ಡಿದೆ. ಆದರೆ, ಪ್ರಧಾನಿ ಮೋದಿ ಅವರು ಕೈಗೊಂಡ ತೀರ್ಮಾನಗಳಿಂದ ಕೊರೊನ ಸೋಂಕು ನಿಯಂತ್ರಿಸುವಲ್ಲಿ ನಾವು ಸಫಲರಾಗಿದ್ದೇವೆ. ಹೀಗಾಗಿ, ಮೋದಿ ನಿರ್ಧಾರಗಳು ವಿಶ್ವಕ್ಕೆ ಮಾದರಿ ಎಂದರು.
ತ್ರಿವಳಿ ತಲಾಖ್ ರದ್ದತಿ, ಪೌರತ್ವ ತಿದ್ದುಪಡಿ ಕಾಯ್ದೆ ಜಾರಿಗೆ ತರಲಾಗಿದೆ. ಗಡಿಯಲ್ಲಿ ನೆರೆ- ಹೊರೆಯ ದೇಶಗಳು ಒಡ್ಡುವ ಸವಾಲುಗಳನ್ನು ಸಮರ್ಪಕವಾಗಿ ಎದುರಿಸಲಾಗುತ್ತಿದೆ. ಹಿಂದೆ ಕೇಂದ್ರ ಮತ್ತು ರಾಜ್ಯದಲ್ಲಿ ಒಂದೇ ಸರ್ಕಾರ ಅಧಿಕಾರಕ್ಕೆ ಬಂದಿರಲಿಲ್ಲ. ಈಗ ಎರಡೂ ಕಡೆ ಬಿಜೆಪಿ ಅಧಿಕಾರದಲ್ಲಿದ್ದು, ಇದರಿಂದ ಜಿಲ್ಲೆಯ ಅಭಿವೃದ್ಧಿಗೆ ಅನುಕೂಲ ಆಗಲಿದೆ ಎಂದರು.
ತಾಳಗುಪ್ಪ- ಸಿದ್ದಾಪುರ ಹಾಗೂ ಹರಿಹರ-ಶಿವಮೊಗ್ಗ ಮಾರ್ಗದ ರೈಲ್ವೆ ಟರ್ಮಿನಲ್, ವರ್ತುಲ ರಸ್ತೆ, ತುಮರಿ ಸೇತುವೆ ನಿರ್ಮಾಣ, ಕೊಲ್ಲೂರು- ರಾಣೇಬೆನ್ನೂರು ರಾಷ್ಟೀಯ ಹೆದ್ದಾರಿಯಂತಹ ಕಾಮಗಾರಿಗಳು ಪ್ರಗತಿಯಲ್ಲಿವೆ. ಇಎಸ್‌ಐ ಆಸ್ಪತ್ರೆ ನಿರ್ಮಾಣ ಸಹ ನಡೆಯುತ್ತಿದೆ ಎಂದು ಹೇಳಿದರು.
ಸಂಸದರು ನಿಧಿಯನ್ನು ಸಮರ್ಪಕವಾಗಿ ಬಳಕೆ ಮಾಡಿಕೊಳ್ಳುತ್ತಿದ್ದೇನೆ. 2 ಕೋಟಿ ರೂ. ಬಸ್ ತಂಗುದಾಣ ನಿರ್ಮಾಣಕ್ಕೆ ಖರ್ಚಾಗಿದೆ. ಶಾಲಾ ಅಭಿವೃದ್ಧಿಗೆ 70 ಲಕ್ಷ ರೂ. ವೆಚ್ಚ ಮಾಡಲಾಗಿದೆ. ಮುಂದಿನ ವರ್ಷದಲ್ಲಿ ಸಂಸದರ ನಿಧಿಯಲ್ಲಿ ಕಡಿಮೆ ಆಗುವ ಸಾಧ್ಯತೆ ಇದೆ. ಇರುವ ಹಣದಲ್ಲಿ ಅಭಿವೃದ್ಧಿ ಕಾಮಗಾರಿ ನಡೆಯಬೇಕಿದೆ ಎಂದರು.
ಮಂಕಿ ಪಾರ್ಕ್ ನಿರ್ಮಾಣಕ್ಕೆ ಹಣ ಬಿಡುಗಡೆ ಆಗಿದೆ. ಜೋಗ್ ಫಾಲ್ಸ್ನಲ್ಲಿ ಅಭಿವೃದ್ಧಿ, ಕೊಡಚಾದ್ರಿ ಮತ್ತು ಕೊಲ್ಲೂರಿನಲ್ಲಿ ಕೇಬಲ್ ಕಾರ್ ನಿರ್ಮಾಣದ ಕಾಮಗಾರಿ ನಡೆಯಲಿದೆ. ಸಕ್ರೆಬೈಲಿನಲ್ಲಿ 100 ಎಕರೆಯಲ್ಲಿ ನಮೋ ಗಾರ್ಡನ್ ವೈದ್ಯಕೀಯ ಸಸ್ಯ ಸಂರಕ್ಷಣೆ ಮತ್ತು ಜಿಲ್ಲಾಡಳಿತ ಭವನ ನಿರ್ಮಾಣದ ಗುರಿ ಇರಿಸಿಕೊಳ್ಳಲಾಗಿದೆ ಎಂದು ಹೇಳಿದರು.