ಶಿವಮೊಗ್ಗ: ನಾನು ಪಕ್ಷ ಕಟ್ಟಬೇಕೆಂಬ ನಿರ್ಧಾರ ಮಾಡಿದ್ದು, ಯಾವುದೇ ಸರ್ಕಾರಿ ವಾಹನ ಬಳಸದೆ ನನ್ನ ಸ್ವಂತ ವಾಹನದಲ್ಲೇ ರಾಜ್ಯ ಪ್ರವಾಸ ಮಾಡುತ್ತಿದ್ದೇನೆ ಎಂದು ಮಾಜಿ ಸಿಎಂ ಬಿ.ಎಸ್.ಯಡಿಯೂರಪ್ಪ ಹೇಳಿದರು.
ಶಿಕಾರಿಪುರದಲ್ಲಿ ನಡೆದ ಸೇವಾ ಮತ್ತು ಸಮರ್ಪಣಾ ಕಾರ್ಯಕ್ರಮದಲ್ಲಿ ಭಾಗಿಯಾಗಿ ಮಾತನಾಡಿದ ಅವರು, ನರೇಂದ್ರ ಮೋದಿ ಪ್ರಧಾನಿಯಾಗಿರುವುದು ನಮ್ಮ ಭಾಗ್ಯ. ಮುಂದಿನ ಅವಧಿಯಲ್ಲೂ ಅವರೇ ಪ್ರಧಾನಿಯಾಗಬೇಕು ಎಂದರು.
ನಂತರ ಮಾತನಾಡಿದ ಸಂಸದ ಬಿ.ವೈ.ರಾಘವೇಂದ್ರ, ನರೇಂದ್ರ ಮೋದಿಯವರು ದೇಶದ ಕಟ್ಟಕಡೆಯ ವ್ಯಕ್ತಿಯ ಬಗ್ಗೆ ಗಮನಹರಿಸಿ ಅವರಿಗೆ ಯೋಜನೆಗಳನ್ನು ರೂಪಿಸಿದ್ದಾರೆ. ಮೋದಿ ಹುಟ್ಟುಹಬ್ಬದ ಅಂಗವಾಗಿ ಸೇವಾ ಮತ್ತು ಸಮರ್ಪಣಾ ದಿನಕ್ಕೆ ಪಕ್ಷದ ಎಲ್ಲಾ ಮೋರ್ಚಾಗಳು ಸಾಕಷ್ಟು ಶ್ರಮವಹಿಸಿವೆ ಎಂದು ಹೇಳಿದರು.
ಪೋಸ್ಟ್ ಕಾರ್ಡ್ ಅಭಿಯಾನ:
ಪ್ರಧಾನಿ ಜನ್ಮದಿನದ ಪ್ರಯುಕ್ತವಾಗಿ ಶಿಕಾರಿಪುರ ಕಚೇರಿಯಲ್ಲಿ ನಿವೃತ್ತ ಯೋಧರು, ಶಿಕ್ಷಕರ ಸಂಘದ ಸದಸ್ಯರು, ರಾಜಕೀಯ ಮುಖಂಡರು ಹಾಗು ವ್ಯಾಪಾರಿಗಳು ಶುಭಾಶಯ ಕೋರಿ ಪತ್ರ ಬರೆದು ಯಡಿಯೂರಪ್ಪನವರಿಗೆ ಹಸ್ತಾಂತರಿಸಿದರು.
ಈ ವೇಳೆ ಎಂ.ಎ.ಡಿ.ಬಿ ಅಧ್ಯಕ್ಷರಾದ ಗುರುಮೂರ್ತಿ, ಅರಣ್ಯ ಅಭಿವೃದ್ಧಿ ನಿಗಮದ ರೇವಣಪ್ಪ, ತಾಲೂಕು ಬಿಜೆಪಿ ಅಧ್ಯಕ್ಷರಾದ ವೀರೇಂದ್ರ ಪಾಟೀಲ್, ಡಿಸಿಸಿ ಬ್ಯಾಂಕ್ ಅಧ್ಯಕ್ಷ ಚನ್ನವೀರಪ್ಪ. ಟಿ, ಪುರಸಭೆ ಅಧ್ಯಕ್ಷರಾದ ಲಕ್ಷ್ಮಿ ಮಹಲಿಂಗಪ್ಪ ಇತರರಿದ್ದರು.