ಶಿವಮೊಗ್ಗ : ಆರೋಗ್ಯ ಸಚಿವ ಡಾ. ಕೆ. ಸುಧಾಕರ್ ಅವರು ಗುತ್ತಿಗೆ ಮತ್ತು ಹೊರಗುತ್ತಿಗೆ ನೌಕರರ ಸಮಸ್ಯೆಗೆ ಸಂಬಂಧಿಸಿದಂತೆ ಯಾವ ನಿರ್ಧಾರವನ್ನೂ ತೆಗೆದುಕೊಳ್ಳದೆ ಒಂದು ರೀತಿಯಲ್ಲಿ ನೌಕರರ ವಿರೋಧಿಯಂತೆ ವರ್ತಿಸುತ್ತಿದ್ದಾರೆ ಎಂದು ವಿಧಾನ ಪರಿಷತ್ ಸದಸ್ಯ ಆಯನೂರು ಮಂಜುನಾಥ್ ಆರೋಪಿಸಿದ್ದಾರೆ. ದಪ್ಪ ಚರ್ಮದ ಆರೋಗ್ಯ ಇಲಾಖೆ ಮತ್ತು ಅಲ್ಲಿನ ಅಧಿಕಾರಿಗಳು ಯಾವ ಭದ್ರತೆಯೂ ಇಲ್ಲದೇ ಶ್ರಮಿಸುತ್ತಿರುವ ಗುತ್ತಿಗೆ ಮತ್ತು ಹೊರಗುತ್ತಿಗೆ ನೌಕರರ ಸೇವಾಭದ್ರತೆ ಬಗ್ಗೆ ಮೌನ ತಾಳಿರುವುದು ಸರಿಯಲ್ಲ ಎಂದು ಅಸಮಾಧಾನ ವ್ಯಕ್ತಪಡಿಸಿದರು.
ಮಾಧ್ಯಮಗೋಷ್ಟಿಯಲ್ಲಿ ಮಾತನಾಡಿದ ಅವರು, ಆರೋಗ್ಯ ಇಲಾಖೆ ಹಾಗೂ ರಾಷ್ಟ್ರೀಯ ಆರೋಗ್ಯ ಅಭಿಯಾನದ ಅಡಿಯಲ್ಲಿ ಸೇವೆ ಸಲ್ಲಿಸುತ್ತಿರುವ ಗುತ್ತಿಗೆ ಮತ್ತು ಹೊರಗುತ್ತಿಗೆ ನೌಕರರ ಸೇವಾಭದ್ರತೆ ಹಾಗೂ ವೇತನ ಪರಿಷ್ಕರಣೆಗೆ ಸಂಬಂಧಿಸಿದಂತೆ ಆರೋಗ್ಯ ಸಚಿವರು ನಿರ್ಲಕ್ಷ್ಯ ಭಾವನೆ ತಾಳುತ್ತಿದ್ದಾರೆ. ಅವರೊಬ್ಬ ಅಸಮರ್ಥ ಸಚಿವ ಎಂದು ಹೇಳಿದರು.
ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಹಾಗೂ ವೈದ್ಯಕೀಯ ಶಿಕ್ಷಣ ಇಲಾಖೆ ಸರ್ಕಾರಿ ಆಸ್ಪತ್ರೆಗಳಲ್ಲಿ ಸುಮಾರು 30 ಸಾವಿರ ವಿವಿಧ ವೃಂದದ ಹುದ್ದೆಗಳಲ್ಲಿ ಗುತ್ತಿಗೆ ಮತ್ತು ಹೊರಗುತ್ತಿಗೆ ನೌಕರರು ಕೆಲಸ ಮಾಡುತ್ತಿದ್ದಾರೆ. ಇದರಲ್ಲಿ ವೈದ್ಯರು, ದಾದಿಯರು, ಪ್ರಯೋಗಶಾಲೆಯಲ್ಲಿ ಕೆಲಸ ಮಾಡುವವರೂ ಸೇರಿದ್ದಾರೆ. ಕೊರೊನಾದಂತಹ ಸಂದರ್ಭದಲ್ಲಿ ತಮ್ಮ ಪ್ರಾಣದ ಹಂಗು ತೊರೆದು ಕೆಲಸ ಮಾಡಿದ್ದಾರೆ. ಈಗ ಮತ್ತೆ ಕೊರೊನಾದ ಸದ್ದು ಕೇಳಿಬರುತ್ತಿದೆ. ಸ್ವತಃ ಆರೋಗ್ಯ ಸಚಿವರೇ ಕೊರೋನಾ ಸೋಂಕಿತರಾಗಿದ್ದಾರೆ ಎಂದು ತಿಳಿದುಬಂದಿದೆ. ಇಂತಹ ಸಂದರ್ಭದಲ್ಲಿ ಅವರ ಸೇವೆ ಅತ್ಯಗತ್ಯವಾಗಿದೆ ಎಂದರು.
ಇವರುಗಳ ಸೇವಾಭದ್ರತೆ ಹಾಗೂ ವೇತನ ಪರಿಷ್ಕರಣೆಗೆಂದೇ ಸರ್ಕಾರ ನಿವೃತ್ತ ಐಎಎಸ್ ಅಧಿಕಾರಿ ಶ್ರೀನಿವಾಸಾಚಾರಿಯವರ ನೇತೃತ್ವದಲ್ಲಿ ಸಮಿತಿಯನ್ನು ರಚಿಸಿತ್ತು. ಇದರ ಸಾಧಕ ಬಾಧಕಗಳ ಅಧ್ಯಯನ ನಡೆಸಿ ವರದಿ ಸಲ್ಲಿಸುವಂತೆ ಆದೇಶ ನೀಡಲಾಗಿತ್ತು. ಈಗ ಸರ್ಕಾರಕ್ಕೆ ಆ ವರದಿ ತಲುಪಿದೆ. ವರದಿ ತಲುಪಿ ಒಂದು ವರ್ಷವಾದರೂ ಕೂಡ ಸರ್ಕಾರ ಈ ಬಗ್ಗೆ ಯಾವುದೇ ಕ್ರಮ ಕೈಗೊಂಡಿಲ್ಲ. ಈ ಬಗ್ಗೆ ಮುಖ್ಯಮಂತ್ರಿಗಳಿಗೂ ನಾವು ಮನವಿ ಮಾಡಿದ್ದೇವೆ. ಅಂದಿನ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ, ಇಂದಿನ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ವರದಿ ಬಗ್ಗೆ ಕಡತ ಮಂಡಿಸಿ ಎಂದು ಸೂಚನೆ ನೀಡಿದ್ದರೂ ಸಚಿವರಾಗಲೀ ಅಧಿಕಾರಿಗಳಾಗಲೀ ಇದುವರೆಗೂ ವರದಿಯನ್ನು ಸಲ್ಲಿಸದಿರುವುದು ನೌಕರರಿಗೆ ಮಾಡಿದ ದ್ರೋಹವಾಗಿದೆ ಎಂದು ವಾಗ್ದಾಳಿ ನಡೆಸಿದರು.
ಸರ್ಕಾರದ ಭಾಗವಾಗಿ ಸರ್ಕಾರದ ವಿರುದ್ಧವೇ ಅಥವಾ ಸಚಿವರ ವಿರುದ್ಧವೇ ನಾನು ಈ ಮಾತುಗಳನ್ನು ಹೇಳಲು ಮುಜುಗರವಾಗುತ್ತಿದೆ. ಆದರೆ, ಕನಿಷ್ಠ ಹತ್ತಿಪ್ಪತ್ತು ಸಾರಿ ಭೇಟಿ ಮಾಡಿದರೂ ಕೂಡ ನಮ್ಮ ಮಾತಿಗೆ ಬೆಲೆಯಿಲ್ಲ. ನಿಜಕ್ಕೂ ಆರೋಗ್ಯ ಸಚಿವರ ಚರ್ಮ ದಪ್ಪವಾಗಿದೆ. ಅವರು ಕೂಡಲೇ ಅಗತ್ಯ ಕ್ರಮ ಕೈಗೊಳ್ಳಬೇಕು. ಇಲ್ಲದಿದ್ದರೆ ಅವರ ವಿರುದ್ಧವೇ ಬೀದಿಯಲ್ಲಿ ನಿಂತು ಹೋರಾಟ ನಡೆಸಬೇಕಾಗುತ್ತದೆ ಎಂದು ಆಯನೂರು ಎಚ್ಚರಿಕೆ ರವಾನಿಸಿದರು.
ಮಾಧ್ಯಮಗೋಷ್ಟಿಯಲ್ಲಿ ಕರ್ನಾಟಕ ರಾಜ್ಯ ಆರೋಗ್ಯ ಮತ್ತು ವೈದ್ಯಕೀಯ ಶಿಕ್ಷಣ ಗುತ್ತಿಗೆ ಹಾಗೂ ಹೊರಗುತ್ತಿಗೆ ನೌಕರರ ಸಂಘದ ರಾಜ್ಯಾಧ್ಯಕ್ಷ ವಿಶ್ವರಾಧ್ಯ ಯಾಮೋಜಿ, ಜಿಲ್ಲಾಧ್ಯಕ್ಷೆ ಡಾ. ಹೇಮಲತಾ, ಉಪಾಧ್ಯಕ್ಷ ಶಂಕರ್ ಅಳಗವಾಡಿ, ರಾಜ್ಯ ಕಾರ್ಯದರ್ಶಿ ಹೆಚ್.ಎನ್. ರುದ್ರೇಶ್ ಉಪಸ್ಥಿತರಿದ್ದರು.
ಇದನ್ನೂ ಓದಿ : ಕೋವಿಡ್ ವಾರಿಯರ್ಗಳನ್ನು ಖಾಯಂ ನೇಮಕ ಮಾಡುವಂತೆ ಪ್ರತಿಭಟನೆ