ಶಿವಮೊಗ್ಗ: ಮಹಾನಗರ ಪಾಲಿಕೆ ವ್ಯಾಪ್ತಿಯ ಹೊರವಲಯದ ಬಡಾವಣೆಗಳಿಗೆ ಕುಡಿಯುವ ನೀರು ಪೂರೈಕೆ ಮಾಡುವ 96.50ಕೋಟಿ ರೂ. ಪ್ರಸ್ತಾವನೆಗೆ ಅನುಮೋದನೆ ನೀಡಲಾಗಿದ್ದು, ಮೂರು ತಿಂಗಳೊಳಗಾಗಿ ಟೆಂಡರ್ ಪ್ರಕ್ರಿಯೆ ಆರಂಭಿಸಲಾಗುವುದು ಎಂದು ಕರ್ನಾಟಕ ರಾಜ್ಯ ನಗರ ನೀರು ಸರಬರಾಜು ಮತ್ತು ಒಳಚರಂಡಿ ಮಂಡಳಿ ಅಧ್ಯಕ್ಷ ರಾಜುಗೌಡ ತಿಳಿಸಿದ್ದಾರೆ.
ಜಿಲ್ಲಾಡಳಿತ ಸಭಾಂಗಣದಲ್ಲಿ ಮಂಡಳಿಯ ಕಾಮಗಾರಿಗಳ ಪ್ರಗತಿ ಪರಿಶೀಲನೆ ನಡೆಸಿ ಮಾತನಾಡಿದ ಅವರು, ಪಾಲಿಕೆ ಹೊರವಲಯದ 13 ಪ್ರದೇಶಗಳಲ್ಲಿ ಸುಮಾರು 325 ಕಿ.ಮೀ ವಿತರಣಾ ಕೊಳವೆ ಮಾರ್ಗ ಮತ್ತು 11 ಸಾವಿರ ಗೃಹ ಸಂಪರ್ಕ ಕಲ್ಪಿಸಲು 96.50 ಕೋಟಿ ರೂ. ಅಂದಾಜು ಯೋಜನೆಗೆ ಮಂಡಳಿ ಅನುಮೋದನೆ ನೀಡಿದ್ದು, ಹಣಕಾಸು ಇಲಾಖೆ ಸಹ ಅಂಗೀಕಾರ ನೀಡಿದೆ.
ಇದೇ ರೀತಿ ವಿರೂಪನಕೊಪ್ಪಕ್ಕೆ ಸೋಮಿನಕೊಪ್ಪದಿಂದ ಪೈಪ್‍ಲೈನ್ ಅಳವಡಿಸುವ 70 ಲಕ್ಷ ರೂ. ಪ್ರಸ್ತಾವನೆಗೆ ಹಾಗೂ ಗೋವಿಂದಪುರ-ಗೋಪಿಶೆಟ್ಟಿಕೊಪ್ಪಕ್ಕೆ ತುಂಗಾ ನದಿಯಿಂದ ಸುಮಾರು 10 ಕಿ.ಮೀ ಪೈಪ್‍ಲೈನ್ ಮೂಲಕ ನೀರು ಪೂರೈಕೆ ಮಾಡುವ 12 ಕೋಟಿ ರೂ. ಪ್ರಸ್ತಾವನೆಗೂ ಆದಷ್ಟು ಬೇಗನೆ ಮಂಜೂರಾತಿ ನೀಡಲಾಗುವುದು ಎಂದು ತಿಳಿಸಿದರು.
ಕುಡಿಯುವ ನೀರು ಕಾಮಗಾರಿ ಪೂರ್ಣಗೊಳಿಸಲು ಗಡುವು: ಶಿವಮೊಗ್ಗ ನಗರದಲ್ಲಿ ನಡೆಯುತ್ತಿರುವ ಕುಡಿಯುವ ನೀರು ಕಾಮಗಾರಿಗಳನ್ನು ಮುಂದಿನ ಸೆಪ್ಟಂಬರ್ ಒಳಗಾಗಿ ಪೂರ್ಣಗೊಳಿಸಬೇಕು. 124 ಕೋಟಿ ರೂ. ವೆಚ್ಚದಲ್ಲಿ 466 ಕಿ.ಮೀ ಉದ್ದದ ಪೈಪ್‍ಲೈನ್ ಮೂಲಕ ಕುಡಿಯುವ ನೀರು ಪೂರೈಕೆ ಮಾಡುವ ಕಾಮಗಾರಿ ಆಗಸ್ಟ್ ನಲ್ಲಿ ಪೂರ್ಣಗೊಳ್ಳಬೇಕಾಗಿತ್ತು. ಮುಂದಿನ ಸೆಪ್ಟಂಬರ್ ಒಳಗಾಗಿ ಕಾಲಮಿತಿಯೊಳಗೆ ಪೂರ್ಣಗೊಳಿಸಬೇಕು. ಮಂಡಳಿಯ ಕಾಮಗಾರಿಗಳ ಅನುಷ್ಟಾನಕ್ಕಾಗಿ ಹೊರಗುತ್ತಿಗೆ ಆಧಾರದ ಮೇಲೆ ಇಂಜಿನಿಯರ್ಗಳ ನೇಮಕಕ್ಕೆ ಅನುಮತಿ ನೀಡಲಾಗುವುದು ಎಂದರು.
ಒಳಚರಂಡಿ ಕಾಮಗಾರಿ: ನಗರದಲ್ಲಿ ಕೈಗೊಳ್ಳಲಾಗಿರುವ 222 ಕಿ.ಮೀ ವ್ಯಾಪ್ತಿಯ ಒಳಚರಂಡಿ ಕಾಮಗಾರಿ ಪೈಕಿ 190 ಕಿ.ಮೀ ಪೂರ್ಣಗೊಂಡಿದೆ. ಇನ್ನುಳಿದ 32 ಕಿ.ಮೀ ಕಾಮಗಾರಿಯನ್ನು ಸಹ ಆದಷ್ಟು ಬೇಗನೇ ಪೂರ್ಣಗೊಳಿಸಬೇಕು. ಕೂಡಲೇ ಒಳಚರಂಡಿ ನಿರ್ಮಾಣವಾಗಿರುವ ಪ್ರದೇಶಗಳಲ್ಲಿನ ಮನೆಗಳಿಗೆ ಸಂಪರ್ಕ ಕಲ್ಪಿಸುವ ಕಾರ್ಯವನ್ನು ಕೈಗೊಳ್ಳಬೇಕು ಎಂದು ಸೂಚಿಸಿದರು.
ಸಂಪರ್ಕ ಕಡಿತ ಎಚ್ಚರಿಕೆ: ನೀರಿನ ಸಂಪರ್ಕ ಪಡೆಯುವುದು ಮನೆಯವರ ಜವಾಬ್ದಾರಿ. ಮಹಾನಗರ ಪಾಲಿಕೆಗೆ 300 ರೂ. ಶುಲ್ಕ ಪಾವತಿಸಿ ನೀರಿನ ಸಂಪರ್ಕವನ್ನು ಕಲ್ಪಿಸಿಕೊಳ್ಳಬೇಕು. ಮುಂದಿನ ಒಂದು ತಿಂಗಗೊಳಗಾಗಿ ಸಂಪರ್ಕ ಪಡೆಯಲು ವಿಫಲರಾಗುವ ಮನೆಗಳ ನೀರಿನ ಸಂಪರ್ಕ ಕಡಿತಗೊಳಿಸಲಾಗುವುದು ಎಂದು ನಾಗರೀಕರಿಗೆ ಮಾಹಿತಿ ನೀಡುವಂತೆ ಸೂಚಿಸಿದರು.
ಜಿಲ್ಲಾ ಉಸ್ತುವಾರಿ ಸಚಿವ ಕೆ.ಎಸ್.ಈಶ್ವರಪ್ಪ ಮಾತನಾಡಿ, ಶಿವಮೊಗ್ಗ ಹೊರವಲಯದ ಕುವೆಂಪು ನಗರ, ಬೊಮ್ಮನಕಟ್ಟೆ, ಮಲವಗೊಪ್ಪ, ಪುರಲೆ, ಶಾಂತಿನಗರ ವಾದಿಹುದಾ, ವೆಂಕಟೇಶ ನಗರ, ತಾವರೆಚಟ್ನಳ್ಳಿ, ಬೊಮ್ಮನಕಟ್ಟೆ ಆಶ್ರಯ ಬಡಾವಣೆ, ಸೋಮಿನಕೊಪ್ಪ, ಮಲ್ಲಿಗೇನಹಳ್ಳಿ ಸೇರಿದಂತೆ 13 ಬಡಾವಣೆಗಳಿಗೆ ಕುಡಿಯುವ ನೀರು ಒದಗಿಸುವ ಪ್ರಸ್ತಾವನೆಗೆ ಅನುಮೋದನೆ ನೀಡಬೇಕು. ಇದೇ ರೀತಿ ಈ ಪ್ರದೇಶಗಳಲ್ಲಿ ಒಳಚರಂಡಿ ನಿರ್ಮಿಸುವ ಕುರಿತು ಡಿಪಿಆರ್ ಸಿದ್ಧಪಡಿಸಲು ಅನುಮೋದನೆ ನೀಡಬೇಕು ಎಂದರು.