ಶಿವಮೊಗ್ಗ: ಬಸವರಾಜ ಬೊಮ್ಮಯಿ ಅವರ ನೂತನ ಸಚಿವ ಸಂಪುಟದಲ್ಲಿ ಜಿಲ್ಲೆಯ ಇಬ್ಬರು ಹಿರಿಯ ನಾಯಕರಿಗೆ ಸಚಿವ ಸ್ಥಾನ ನೀಡಲಾಗಿದೆ. 4 ಬಾರಿ ಶಾಸಕರಾಗಿರುವ ತೀರ್ಥಹಳ್ಳಿಯ ಆರಗ ಜ್ಞಾನೇಂದ್ರ ಅವರು ಇದೇ ಮೊದಲ ಬಾರಿಗೆ ಸಚಿವರಾಗಿ ಪ್ರಮಾಣವಚನ ಸ್ವೀಕರಿಸಿದರೆ. ಐದು ಬಾರಿ ಸಚಿವರಾಗಿರುವ ಅನುಭವ ಹೊಂದಿರುವ ಕೆ.ಎಸ್ ಈಶ್ವರಪ್ಪ ಸಹ ಈ ಬಾರಿಯ ನೂತನ ಸಚಿವ ಸಂಪುಟದಲ್ಲಿ ಪ್ರಮಾಣವಚನ ಸ್ವೀಕರಿಸಿದ್ದಾರೆ.
ಈ ಬಾರಿಯ ನೂತನ ಸಚಿವ ಸಂಪುಟದಲ್ಲಿ ಕೆ.ಎಸ್ ಈಶ್ವರಪ್ಪ ಅವರನ್ನು ಕೈ ಬಿಡಲಾಗುತ್ತದೆ ಎಂಬ ಮಾತುಗಳು ಬಿಜೆಪಿಯಲ್ಲಿ ಕೇಳಿ ಬಂದಿತ್ತು. ಆದರೆ, ಕೆ.ಎಸ್ ಈಶ್ವರಪ್ಪ ಅವರು ತಮ್ಮ ರಾಜಕೀಯ ಪ್ರಭಾವ ಬಳಸಿ ಮತ್ತೊಮ್ಮೆ ಸಚಿವರಾಗುವ ಮೂಲಕ ತಮ್ಮ ರಾಜಕೀಯ ಶಕ್ತಿಯನ್ನು ಸಾಬೀತು ಪಡಿಸಿಕೊಂಡಿದ್ದಾರೆ.
ಇದನ್ನೂ ಓದಿ: ಬೊಮ್ಮಾಯಿ ಸಂಪುಟದಲ್ಲಿ ಬಿಎಸ್ವೈ ಪುತ್ರನಿಗೆ ಸಿಗದ ಚಾನ್ಸ್: ವಿಜಯೇಂದ್ರ ವಿಷಯದಲ್ಲಿ ಹೈಕಮಾಂಡ್ ನಡೆ ಏನಿದೆ?
4 ಬಾರಿ ಶಾಸಕರಾಗಿ, ವಿವಿಧ ನಿಗಮ ಮಂಡಳಿಗಳ ಅಧ್ಯಕ್ಷರಾಗಿ ಕಾರ್ಯನಿರ್ವಹಿಸಿದ ಅನುಭವ ಇದ್ದ ಹಿರಿಯ ಶಾಸಕ ಆರಗ ಜ್ಞಾನೇಂದ್ರ ಅವರಿಗೆ ಈವರೆಗೂ ಸಚಿವರಾಗುವ ಅವಕಾಶ ಕೂಡಿ ಬಂದಿರಲಿಲ್ಲ. ಆದರೆ ಸಿಎಂ ಬಸವರಾಜ ಬೊಮ್ಮಯಿ ಅವರ ನೇತೃತ್ವದ ನೂತನ ಸಚಿವ ಸಂಪುಟದಲ್ಲಿ ಸ್ಥಾನ ಪಡೆಯುವ ಮೂಲಕ ಮೊದಲ ಬಾರಿಗೆ ಸಚಿವರಾಗಿ ಆಯ್ಕೆಯಾಗಿದ್ದು, ದೇವರ ಹೆಸರಿನಲ್ಲಿ ಪ್ರಮಾಣವಚನ ಸ್ವೀಕರಿಸಿ ಉತ್ತಮ ಆಡಳಿತ ನೀಡುವ ಭರವಸೆ ನೀಡಿದ್ದಾರೆ.
ಬದಲಾದ ರಾಜಕೀಯ ವಿದ್ಯಮಾನಗಳಿಂದಾಗಿ ಯಡಿಯೂರಪ್ಪ ಅವರ ನೇತೃತ್ವದ ಸಚಿವ ಸಂಪುಟ ವಿಸರ್ಜನೆ ಯಾಗಿ ಬಸವರಾಜ ಬೊಮ್ಮಯಿ ಅವರ ನೇತೃತ್ವದ ನೂತನ ಸಚಿವ ಸಂಪುಟ ರಚನೆಯಾಗಿದೆ. ಜಿಲ್ಲೆಯ ಇಬ್ಬರು ಹಿರಿಯ ನಾಯಕರಿಗೆ ಸಚಿವ ಸ್ಥಾನ ಸಿಕ್ಕಿದೆ. ಇದರಿಂದಾಗಿ ಜಿಲ್ಲೆಯ ಬಿಜೆಪಿ ಕಾರ್ಯಕರ್ತರಿಗೆ ಇನ್ನಷ್ಟು ಹುಮ್ಮಸ್ಸು ಬಂದಿದೆ. ಮುಂದಿನ ದಿನಗಳಲ್ಲಿ ಇಬ್ಬರು ನೂತನ ಸಚಿವರು ಜಿಲ್ಲೆಯ ಅಭಿವೃದ್ಧಿಗೆ ಹೇಗೆ ಮುನ್ನುಡಿ ಬರೆಯಲಿದ್ದಾರೆ ಎಂಬುದನ್ನು ಕಾದು ನೋಡಬೇಕಿದೆ.