ಮೈಸೂರು: ಸಾಂಸ್ಮೃತಿಕ ನಗರಿ ಮೈಸೂರಿನಲ್ಲಿಯೂ ಮತದಾನ ಚುರುಕಾಗಿ ನಡೆಯುತ್ತಿದ್ದು, ರಾಜವಂಶಸ್ಥ ಯದುವೀರ್ ಕೃಷ್ಣದತ್ತ ಚಾಮರಾಜ ಒಡೆಯರ್ ದಂಪತಿ ಮತದಾನ ಮಾಡಿದರು.
ಮೈಸೂರಿನ ಶ್ರೀಕಾಂತ ಸಂಸ್ಕೃತ ಪಾಠ ಶಾಲೆಯ ಮತಗಟ್ಟೆ ಸಂಖ್ಯೆ 179ರಲ್ಲಿ ಯದುವೀರ್ ದಂಪತಿ ಮತ ಚಲಾಯಿಸಿದರು.
ಮತದಾನ ಮಾಡಿದ ನಂತರ ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ಮೈಸೂರಿನಲ್ಲಿ ಪ್ರಜಾಪ್ರತಿನಿಧಿ ವ್ಯವಸ್ಥೆಯನ್ನು ಪ್ರಾರಂಭ ಮಾಡಿದ್ದು ರಾಜವಂಶಸ್ಥರು. ಜಯ ಚಾಮರಾಜೇಂದ್ರ ಒಡೆಯರ್ ಅಂದು ಪ್ರಜಾಪ್ರಭುತ್ವದ ಬೀಜ ನೆಟ್ಟಿದ್ದರು. ಚುನಾವಣೆ ಎಂಬುದು ಮೈಸೂರಿನಿಂದಲೇ ಮೊದಲು ಪ್ರಾರಂಭವಾಗಿದ್ದು ಎಂದು ಹೇಳಿದರು.
ಮತದಾನ ಎಲ್ಲರ ಕರ್ತವ್ಯ. ದೇಶದ ಅಭಿವೃದ್ಧಿ ದೃಷ್ಟಿಯಿಂದ ಎಲ್ಲರು ಮತದಾನ ಹಾಕಬೇಕು ಎಂದು ಅವರು ಕರೆ ನೀಡಿದರು.
ಸುತ್ತೂರು ಶ್ರೀ ಗಳಿಂದ ಮತದಾನ:
ಮೈಸೂರಿನ ನಂಜನಗೂಡು ರಸ್ತೆಯಲ್ಲಿರುವ ಜೆ.ಎಸ್.ಎಸ್. ಕಾಲೇಜಿನಲ್ಲಿ ಸುತ್ತೂರು ಶ್ರೀಗಳು ಮತದಾನ ಮಾಡಿದರು. ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಮತದಾನ ಮಾಡುವುದು ಸೌಭಾಗ್ಯ. ಮತದಾನ ಮಾಡಿ ನಮ್ಮ ಕರ್ತವ್ಯ ಪಾಲಿಸಬೇಕು ಎಂದು ಸುತ್ತೂರು ಶ್ರೀಗಳು ಹೇಳಿದರು. ಇನ್ನು ಮತಗಟ್ಟೆ ಸಂಖ್ಯೆ 241ರಲ್ಲಿ ಮಠದ ಕಿರಿಯ ಶ್ರೀಗಳು ಮೊದಲ ಬಾರಿಗೆ ಮತ ಚಲಾಯಿಸಿದರು.