ಮೈಸೂರು: ಮೈಸೂರು ಜಿಲ್ಲಾ ಉಸ್ತುವಾರಿ ಸಚಿವರಾದ ವಿ.ಸೋಮಣ್ಣ ದಸರಾ ಕ್ರೀಡಾಪಟುಗಳಿಗೆ ಪಾವತಿಸಬೇಕಿದ್ದ ಬಹುಮಾನ ಹಣವನ್ನು ಸರ್ಕಾರದಿಂದ ಬಿಡುಗಡೆಗೊಳಿಸಿ ಹಲವು ತಿಂಗಳ ಸಮಸ್ಯೆಯನ್ನು ಇತ್ಯರ್ಥಗೊಳಿಸಿದ್ದಾರೆ.
ದಸರಾ ಕ್ರೀಡಾಕೂಟದಲ್ಲಿ ಭಾಗವಹಿಸಿ ವಿಜೇತರಾಗಿದ್ದ ಕ್ರೀಡಾಪಟುಗಳಿಗೆ ಬಹುಮಾನದ ಹಣವನ್ನು ಈವರೆಗೆ ಬಿಡುಗಡೆ ಮಾಡಿರಲಿಲ್ಲ. ನಿನ್ನೆ ಬೆಳಗ್ಗೆ ಚಾಮುಂಡಿ ವಿಹಾರ ಕ್ರೀಡಾಂಗಣದಲ್ಲಿ ಆಯೋಜಿಸಿದ್ದ ಸರ್ಕಾರಿ ನೌಕರರ ಕ್ರೀಡಾಕೂಟ ಉದ್ಘಾಟನೆಗೆ ಆಗಮಿಸಿದ್ದ ಸಚಿವರ ಗಮನಕ್ಕೆ ಈ ವಿಷಯ ಬಂತು. ಬಹುಮಾನ ಹಣ ಪಾವತಿಸಲು ವಿಳಂಬ ಮಾಡಿದ್ದ ಅಧಿಕಾರಿಗಳಿಗೆ ಸ್ಥಳದಲ್ಲೇ ತರಾಟೆ ತೆಗೆದುಕೊಂಡ ಸಚಿವರು, ತಕ್ಷಣ ಸಮಸ್ಯೆ ಇತ್ಯರ್ಥ ಆಗಬೇಕು ಎಂದು ತಾಕೀತು ಮಾಡಿದರು. ಈ ಸಮಸ್ಯೆ ಇತ್ಯರ್ಥಕ್ಕೆ ಬೇಕಾದ 54 ಲಕ್ಷ ರೂ.ಗಳ ಅನುದಾನವನ್ನು ಸಚಿವರು ಸಂಜೆಯೊಳಗೆ ಬಿಡುಗಡೆ ಮಾಡಿಸಿದ್ದಾರೆ.
ಇನ್ನು ದಸರಾ ಕ್ರೀಡಾಕೂಟದ 1,451 ಮಂದಿ ವಿಜೇತರಿಗೆ ಬಹುಮಾನ ಹಣವನ್ನು ನೀಡಬೇಕಾಗಿತ್ತು. ಈ ಪೈಕಿ 726 ವೈಯಕ್ತಿಕ ಬಹುಮಾನಗಳು ಹಾಗೂ 725 ಗುಂಪು ಸ್ಪರ್ಧೆ ಬಹುಮಾನಗಳು ಸೇರಿವೆ. ಈ ಎಲ್ಲರ ಬ್ಯಾಂಕ್ ಖಾತೆಗೆ ಈಗ ಹಣ ವರ್ಗಾವಣೆ ಆಗುತ್ತಿದೆ.
ಎಲ್ಲಾ ಬಹುಮಾನದ ಹಣವನ್ನು ಆರ್.ಟಿ.ಜಿ.ಎಸ್ ಮೂಲಕ ಫಲಾನುಭವಿಗಳ ಖಾತೆಗೆ ಕೂಡಲೇ ವರ್ಗಾಯಿಸಲಾಗುವುದು. ಕ್ರೀಡಾಪಟುಗಳು ಆತಂಕ ಪಡಬೇಕಿಲ್ಲ ಎಂದು ಸಚಿವರು ಭರವಸೆ ನೀಡಿದ್ದಾರೆ. ಕ್ರೀಡಾಕೂಟಕ್ಕೆ ಊಟೋಪಚಾರ ಸರಬರಾಜು ಮಾಡಿದವರಿಗೂ ಬಿಲ್ ಬಾಕಿ ಇದ್ದು, ಅದನ್ನೂ ಕೂಡ ಕೂಡಲೇ ಪಾವತಿಸಲಾಗುತ್ತದೆ ಎಂದು ಸಚಿವರು ತಿಳಿಸಿದ್ದಾರೆ.