ಮೈಸೂರು : ಹಾಡಿಯಲ್ಲಿ ವಾಸವಾಗಿರುವ ಗಿರಿಜನರು ಈಗ ಕೋವಿಡ್ ಲಸಿಕೆ ಪಡೆಯಲು ಹಿಂದೇಟು ಹಾಕುತ್ತಿದ್ದು, ಅಧಿಕಾರಿಗಳಿಗೆ ಹಾಗೂ ಜನ ಪ್ರತಿನಿಧಿಗಳಿಗೆ ಅವರನ್ನು ಮನವೊಲಿಸುವುದೇ ದೊಡ್ಡ ಸವಾಲಗಿದೆ.
ಹೌದು, 21 ನೇ ಶತಮಾನದಲ್ಲಿಯೂ ಆಧುನಿಕ ಜಗತ್ತಿನಿಂದ ದೂರ ಉಳಿದು, ಕಾಡಿನ ಮಧ್ಯೆ ಹಾಗೂ ಕಾಡಂಚಿನಲ್ಲಿ ಪ್ರಕೃತಿಯ ಜೊತೆ ವಾಸ ಮಾಡುವ ಆದಿವಾಸಿಗಳು ಯಾವಾಗಲೂ ಆಸ್ಪತ್ರೆಗಳಿಂದ ದೂರ.
ಲಸಿಕೆ ಪಡೆಯಲು ಹಿಂದೇಟು ಏಕೆ?
ಮೈಸೂರು ಜಿಲ್ಲೆಯ ಹೆಚ್.ಡಿ.ಕೋಟೆ ,ಹುಣಸೂರು ನಂಜನಗೂಡಿನ ಯಡಿಯಾಲ ಭಾಗ , ಪಿರಿಯಾಪಟ್ಟಣ ,ಮಡಿಕೇರಿ ಗಡಿ ಭಾಗ ಕೊಡಗು ಜಿಲ್ಲೆ ಹಾಗೂ ಚಾಮರಾಜನಗರ ಜಿಲ್ಲೆಯ ಕೆಲವು ಭಾಗಗಳಲ್ಲಿ, ಜೆನು ಕುರುಬರು, ಬೆಟ್ಟದ ಕುರುಬರು, ಸೋಲಿಗರು, ಸೇರಿದಂತೆ ಹಲವಾರು ಗಿರಿಜನರು ವಾಸಮಾಡುತ್ತಾರೆ, ಅಂದಾಜು ಮೈಸೂರು ಜಿಲ್ಲೆಯಲ್ಲಿ 1 ಲಕ್ಷಕ್ಕೂ ಹೆಚ್ಚಿನ ಜನ ಹಾಡಿಗಳಲ್ಲಿ ವಾಸ ಮಾಡುತ್ತಾರೆ. ಅವರುಗಳಲ್ಲಿ ಹೆಚ್ಚಿನ ಜನ ಅನಕ್ಷರಸ್ಥರಾಗಿದ್ದು ನಗರಗಳ ಆಸ್ಪತ್ರೆಗೆ ಬರುವುದು ಕಡಿಮೆ. ಕಾಯಿಲೆ ಏನಾದರೂ ಬಂದರೆ ಅರಣ್ಯದಲ್ಲಿ ಸಿಗುವ ಗಿಡಮೂಲಿಕೆಗಳನ್ನು ಬಳಸಿಕೊಂಡು ರೋಗವನ್ನು ಗುಣಪಡಿಸಿಕೊಳ್ಳುತ್ತಾರೆ.
ಪ್ರಮುಖ ವಿಷಯ ಎಂದರೆ ಇವರು ಇಂಜೆಕ್ಷನ್ ಎಂದರೆ ಭಯ ಪಡುತ್ತಾರೆ, ಮಾತ್ರೆ ಬೇಕಾದರೆ ತಿನ್ನುತ್ತಾರೆ. ಹಾಗೆಯೇ ಗಿರಿಜನರಿಗೆ ಅನಾರೋಗ್ಯ ಏನಾದರೂ ಉಂಟಾದರೆ ಆಸ್ಪತ್ರೆಗೆ ಬರಲು ಆಂಬ್ಯುಲೆನ್ಸ್ ಬಳಸುವುದಿಲ್ಲ ಬದಲಾಗಿ ಕಾರನ್ನು ಬಾಡಿಗೆ ಮಾಡಿಕೊಂಡು ನಗರ ಪ್ರದೇಶಕ್ಕೆ ಬರುತ್ತಾರೆ. ಆಂಬ್ಯುಲೆನ್ಸ್ ಎಂದರೆ ಅದು ಕೇವಲ ಹೆಣ ತರುವ ವಾಹನ ಎಂದು ಕೊಂಡು ಈ ರೀತಿ ಮಾಡುತ್ತಿದ್ದಾರೆ.
ಕೋವಿಡ್ ಪ್ರಕರಣಗಳು ಪತ್ತೆಯಾಗಿಲ್ಲ:
ಪ್ರಪಂಚವನ್ನೆ ನಡುಗುಸುತ್ತಿರುವ ಕೋವಿಡ್ ಮಾಹಾಮಾರಿ ಹಾಡಿಯ ಯಾರೊಬ್ಬರಲ್ಲೂ ಇದರ ಸುಳಿವು ಕಾಣಿಸಿಕೊಂಡಿಲ್ಲ . 100 ವರ್ಷಕ್ಕೂ ಹೆಚ್ಚು ಕಾಲ ಬದುಕುವ ಹಾಡಿ ಜನರಲ್ಲಿ ಸಕ್ಕರೆ ಕಾಯಿಲೆ, ರಕ್ತದೊತ್ತಡ, ಹೃದಯಘಾತ ಹಾಗೂ ತಲೆಕೂದಲು ಬಿಳಿ ಆಗುವುದು ತುಂಬ ಕಡಿಮೆ. ನೈಸರ್ಗಿಕವಾಗಿ ಕಾಡಿನಲ್ಲಿ ಸಿಗುವ ಗೆಡ್ಡೆ ಗೆಣಸುಗಳನ್ನು ತಿನ್ನುವ ಕಾರಣಕ್ಕೇನೋ ಅವರಿಗೆ ಹೆಚ್ಚಾಗಿ ಇಂಥಹ ಸಮಸ್ಯೆಗಳು ಕಾಣಿಸಿಕೊಳ್ಳುವುದಿಲ್ಲ.
ಕೋವಿಡ್ ಲಸಿಕೆ ಇಂಜೆಕ್ಷನ್ ರೂಪದಲ್ಲಿ ಇರುವುದರಿಂದ ಅದನ್ನು ಪಡೆಯಲು ಕೊಂಚ ಭಯ ಪಡುತ್ತಿದ್ದಾರೆ. ಅನಕ್ಷರಸ್ಥರಾಗಿರುವ ಕಾರಣ ಜಾಲತಾಣಗಳಲ್ಲಿ ಲಸಿಕೆ ಬಗ್ಗೆ ಬರುವ ಸುಳ್ಳು ಸುದ್ದಿಗಳನ್ನು ಬೇಗ ನಂಬುತ್ತಾರೆ. ಈ ಕಾರಣಕ್ಕಾಗಿ ಕೋವಿಡ್ ಲಸಿಕೆ ಪಡೆಯಲು ಹಿಂದೇಟು ಹಾಕುತ್ತಾರೆ ಎನ್ನುತ್ತಾರೆ ಹಾಡಿ ಜನಾಂಗದ ಮುಖಂಡ ಜಗದೀಶ್.
ಅಧಿಕಾರಿಗಳ ಜೊತೆ ಸ್ಥಳೀಯ ಶಾಸಕ ಹೆಚ್.ವಿ.ಮಂಜುನಾಥ್ ಗಿರಿಜನ ಹಾಡಿಗೆ ಆಗಮಿಸಿ, ಮನವೊಲಿಸಲು ಪ್ರಯತ್ನಿಸಿದರು. ಆದರೆ, ಇದಕ್ಕೊಪ್ಪದ ಹಾಡಿಯ ಜನರು, ನಮಗೆ ಕೋವಿಡ್ ಲಸಿಕೆ ಬೇಡ. ಕಾಡಿನಲ್ಲಿ ಸಿಗುವ ಔಷಧಿಗಳನ್ನೇ ನಾವು ಮತ್ತು ನಮ್ಮ ಮಕ್ಕಳು ತೆಗೆದುಕೊಳ್ಳುತ್ತೇವೆ. ನಮಗೆ ಬೇರೆ ಯಾವ ಲಸಿಕೆಯು ಬೇಡ ಎನ್ನುತ್ತಿದ್ದಾರೆ.