ಮೈಸೂರು: ಚಾಮುಂಡಿ ಬೆಟ್ಟದಲ್ಲಿರುವ ಬೃಹತ್ ನಂದಿ ವಿಗ್ರಹಕ್ಕೆ ಹಾಲು, ಮೊಸರು, ಗಂಧ, ಕುಂಕುಮ, ಅರಿಶಿಣ, ಎಳನೀರು, ಭಸ್ಮ ಹೀಗೆ 47 ಕ್ಕೂ ಹೆಚ್ಚು ಪದಾರ್ಥಗಳಿಂದ ಅಭಿಷೇಕ ಮಾಡಲಾಗಿದ್ದು, ಭಕ್ತರ ಕಣ್ಣುಗಳು ಭಕ್ತಿಯ ಪರಾಕಾಷ್ಟೆಯಲ್ಲಿ ಚಿಮ್ಮುತ್ತಿತ್ತು.
ಹೌದು, ಬೆಟ್ಟ ಹತ್ತುವ ಬಳಗದ ವತಿಯಿಂದ ಪ್ರತಿ ವರ್ಷದ ಮೊದಲ ಕಾರ್ತಿಕ ಸೋಮವಾರದಂದು ಚಾಮುಂಡಿ ಬೆಟ್ಟದಲ್ಲಿರುವ ಬೃಹತ್ ನಂದಿ ವಿಗ್ರಹಕ್ಕೆ ವಿಶೇಷ ಅಭಿಷೇಕ, ಮಹಾ ರುದ್ರಾಭಿಷೇಕ ಮತ್ತು ವಿಶೇಷ ಪೊಜೆ ನೆರವೇರಿಸಲಾಗುತ್ತದೆ. ಹಾಗಾಗಿಯೇ ಒಂದು 500 ಲೀಟರ್ ಹಾಲು, 250 ಲೀಟರ್ ಮೊಸರು, 10 ಲೀಟರ್ ತುಪ್ಪದಿಂದ ಇಂದು ಅಭಿಷೇಕ ಮಾಡಲಾಯಿತು. ಅಷ್ಟೇ ಅಲ್ಲದೆ ಅಭಿಷೇಕದ ದೃಶ್ಯವನ್ನು ಭಕ್ತಾದಿಗಳು ಹಾಗೂ ವಿದೇಶಿಗರು ಕಣ್ತುಂಬಿಕೊಂಡು ಸುಂದರ ದೃಶ್ಯವನ್ನು ಮೊಬೈಲ್ನಲ್ಲಿ ಸೆರೆ ಹಿಡಿದು ಆನಂದಿಸಿದರು.
ಇನ್ನು ಚಾಮುಂಡಿ ಬೆಟ್ಟದ ದೊಡ್ಡ ನಂದಿ ಮಾರ್ಗದಲ್ಲಿ ರಸ್ತೆ ಕುಸಿತವಾದ ಹಿನ್ನಲೆ ನಂದಿ ಮಹಾಭಿಷೇಕ ಪೂಜಾ ಕೈಂಕರ್ಯಗಳಿಗೆ ತೆರಳಲು ಭಕ್ತರು ಪರದಾಡುವಂತಾಯಿತು. ಹಾಗಾಗಿ ಬೆರಳೆಣಿಕೆಯಷ್ಟು ಭಕ್ತರ ಸಮ್ಮುಖದಲ್ಲಿಯೇ ಮಹಾಭಿಷೇಕ ಕಾರ್ಯಕ್ರಮವನ್ನು ನೆರವೇರಿಸಲಾಗಿಯಿತು. ಈ ವೇಳೆ ತ್ವರಿತಗತಿಯಲ್ಲಿ ರಸ್ತೆ ಕಾಮಗಾರಿ ಮುಗಿಸುವಂತೆ ಕೆಲ ಭಕ್ತರು ಆಗ್ರಹಿಸಿದರು.