ಮೈಸೂರು: ಲೋಕಸಭಾ ಚುನಾವಣೆಯ ಮತದಾನಕ್ಕೆ ಕೇವಲ 7 ದಿನಗಳು ಬಾಕಿ ಇದ್ದು, ಸ್ವೀಪ್ ಸಮಿತಿ ಮತದಾನ ಹೆಚ್ಚಿಸಲು ಹಲವು ರೀತಿಯ ಜಾಗೃತಿ ಮೂಡಿಸಿ ಮತದಾರರನ್ನು ಸೆಳೆಯಲು ಮುಂದಾಗಿದೆ.
ಸ್ವೀಪ್ ಸಮಿತಿ ಹಾಗೂ ವಿವಿಧ ಸಂಘಟನೆಗಳ ಸಹಯೋಗದೊಂದಿಗೆ ಇಂದು ಕೋಟೆ ಆಂಜನೇಯ ದೇವಸ್ಥಾನದ ಮುಂಭಾಗ ಏರ್ಪಡಿಸಿದ್ದ ಸೈಕ್ಲೋಥಾನ್ ಮೂಲಕ ಮತದಾನ ಜಾಗೃತಿಗೆ ಮಾಜಿ ಕ್ರಿಕೆಟಿಗ ಜಾವಗಲ್ ಶ್ರೀನಾಥ್, ನಟ ಧನಂಜಯ, ಗಾಯಕ ಶ್ರೀಹರ್ಷ ಅವರು ನಗಾರಿ ಬಾರಿಸುವ ಮೂಲಕ ಚಾಲನೆ ನೀಡಿದರು.
ನಂತರ ಜಾವಗಲ್ ಶ್ರೀನಾಥ್ ಮಾತನಾಡಿ, ದೇಶದ ಭವಿಷ್ಯ ರೂಪಿಸಲು ಎಲ್ಲರೂ ತಪ್ಪದೇ ಮತದಾನ ಮಾಡಿ. ಸೂಕ್ತ ವ್ಯಕ್ತಿ ಆಯ್ಕೆ ಮಾಡಲು ಮತದಾನದಲ್ಲಿ ಪಾಲ್ಗೊಳ್ಳಿ ಎಂದು ಕರೆ ನೀಡಿದರು.
ಬಳಿಕ ನಟ ಡಾಲಿ ಧನಂಜಯ್ ಮಾತನಾಡಿ, ಸಾಲು ಸಾಲು ರಜೆ ಇದೆ ಎಂದು ಪ್ರವಾಸ ಹೊರಡಬೇಡಿ. ನಿಮ್ಮ ಒಂದು ಬೆರಳು ದೇಶದ ಭವಿಷ್ಯ ರೂಪಿಸುತ್ತದೆ ಎಂದರು.
ಗಾಯಕ ಶ್ರೀಹರ್ಷ 'ವೋಟ್ ಮಾಡಿ' ಹಾಡಿದರು. ಮೈಸೂರು ಪ್ರಧಾನ ಹಾಗೂ ಸತ್ರ ನ್ಯಾಯಾಧೀಶರಾದ ಸುರೇಶ್ ಕೆ ವಂಟಿಗೂಡಿ ಅವರು ಮತದಾನ ಮಾಡುವಂತೆ ಪ್ರತಿಜ್ಞಾವಿಧಿ ಬೋಧಿಸಿದರು.