ಮೈಸೂರು: ಶ್ರೀಲಂಕಾದಲ್ಲಿ ನಡೆದ ಸರಣಿ ಸ್ಫೋಟದ ಹಿನ್ನೆಲೆ ಸಾಂಸ್ಕೃತಿಕ ನಗರಿ ಮೈಸೂರಿನ ಪ್ರಮುಖ ತಾಣಗಳಿಗೆ ಪೊಲೀಸ್ ಭದ್ರತೆ ನೀಡಲಾಗಿದ್ದು, ಅದರಲ್ಲೂ ಮೈಸೂರು ಅರಮನೆ ಸುತ್ತಮುತ್ತ ಕಟ್ಟೆಚ್ಚರ ವಹಿಸಲಾಗಿದೆ.
ಪ್ರತಿ ವರ್ಷವೂ ಮೈಸೂರಿನ ಅರಮನೆಗೆ 35 ಲಕ್ಷಕ್ಕೂ ಅಧಿಕ ಪ್ರವಾಸಿಗರು ಭೇಟಿ ನೀಡುತ್ತಾರೆ. ಅದರಲ್ಲೂ ಶಾಲಾ ರಜೆ ದಿನಗಳಲ್ಲಿ ಅತಿ ಹೆಚ್ಚು ಪ್ರವಾಸಿಗರು ಭೇಟಿ ಕೊಡುವ ಸ್ಥಳ ಇದಾಗಿದ್ದು ಶ್ರೀಲಂಕಾದ ಸರಣಿ ಬಾಂಬ್ ಸ್ಫೋಟದ ಹಿನ್ನಲೆಯಲ್ಲಿ ಅರಮನೆಗೆ ಬರುವ ಪ್ರತಿಯೊಬ್ಬ ಪ್ರವಾಸಿಗರನ್ನು ಹಾಗೂ ಅವರ ಲಾಗೇಜ್ಗಳನ್ನು ಪರಿಶೀಲನೆ ಮಾಡಲು ಮೆಟಲ್ ಡಿಟೆಕ್ಟರ್ ಹಾಗೂ ಲಗೇಜ್ ಸ್ಕ್ಯಾನರ್‌ಗಳನ್ನು ಅರಮನೆಯ ವರಹಾ ದ್ವಾರದ ಟಿಕೆಟ್ ಕೌಂಟರ್ ಬಳಿ ಅಳವಡಿಸಲಾಗಿದೆ.
ಅರಮನೆಯ ಭದ್ರತೆಯ ವಿವರ:
ಅರಮನೆಯ ಭದ್ರತೆಗೆ ಪ್ರತ್ಯೇಕ ಎಸಿಪಿ ನೇತೃತ್ವದ ಭದ್ರತಾ ತಂಡವಿದ್ದು, ಈ ತಂಡದಲ್ಲಿ 70 ಜನ ಪೊಲೀಸ್ ಪೇದೆಗಳಿರುತ್ತಾರೆ. ಅದರಲ್ಲಿ ಎಸಿಪಿ, ಇನ್ಸ್‌ಪೆಕ್ಟರ್ ಹಾಗೂ ಎಎಸ್ಐ ಒಬ್ಬರು ಒಳಗೊಂಡಿರುತ್ತಾರೆ. ಅರಮನೆಯ ದ್ವಾರಗಳಲ್ಲಿ ದಿನದ 24 ಗಂಟೆ ಮೂರು ಶಿಫ್ಟ್ಗಳಲ್ಲಿ ಪ್ರತಿ ಗೇಟ್ಗೆ ನಾಲ್ಕು ಜನ ಪಿಸಿ, ಇಬ್ಬರು ಹೆಡ್ ಕಾನ್ಸ್‌ಟೇಬಲ್ ಕಾರ್ಯ ನಿರ್ವಹಿಸುತ್ತಾರೆ. ಇದಲ್ಲದೇ ಪ್ರತಿದಿನ ಬೆಳಿಗ್ಗೆ ಮತ್ತು ಸಂಜೆ ಬಾಂಬ್ ನಿಷ್ಕ್ರಿಯದಳದವರು ಕಡ್ಡಾಯವಾಗಿ ಪರಿಶೀಲನೆ ನಡೆಸುತ್ತಿದ್ದಾರೆ ಎಂದು ಅಧಿಕಾರಗಳು ಸ್ಪಷ್ಟಪಡಿಸಿದ್ದು, ಮೈಸೂರು ಅರಮನೆಗೆ ಕೇಂದ್ರ ಕೈಗಾರಿಕಾ ಪಡೆಗಳ ನಿಯೋಜನೆಗೆ ಕಳೆದ ವರ್ಷ ಪ್ರಸ್ತಾವನೆಯನ್ನು ಸಲ್ಲಿಸಲಾಗಿತ್ತು. ಆದರೆ ಮಹಾರಾಣಿ ಪ್ರಮೋದಾ ದೇವಿ ಒಡೆಯರ್ ಅವರ ವಿರೋಧದಿಂದ ಈ ಪ್ರಸ್ತಾವನೆಯನ್ನು ಕೈ ಬಿಡಲಾಗಿದೆ ಎನ್ನಲಾಗಿದೆ.