ಮೈಸೂರು: ಭ್ರಷ್ಟಾಚಾರ ಆರೋಪಕ್ಕೆ ಯಾರೋ ನೀಡಿರುವ ನೋಟಿಸ್ಗೆ ಯಾವ ಲಾಯರ್ ಹೆದರುತ್ತಾರೆ ಎಂದು ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಪ್ರಶ್ನಿಸಿದ್ದಾರೆ.
ಮೈಸೂರಿನ ರಾಮಕೃಷ್ಣನಗರದಲ್ಲಿ ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ಭ್ರಷ್ಟಾಚಾರ ಆರೋಪಕ್ಕೆ ನೋಟಿಸ್ ನೀಡಿದ್ದಾರೆ. ನೋಟಿಸ್ ಬಂಡವಾಳ ಏನೆಂದು ನನಗೆ ಗೊತ್ತಿಲ್ವಾ? ನಾನೂ ಲಾಯರ್ ತಾನೆ, ನೋಟಿಸ್ ಬಗ್ಗೆ ನನಗೆ ಗೊತ್ತಿಲ್ವಾ? ನಾನೇನು ನೋಟಿಸ್ಗೆ ಹೆದರಿಕೊಳ್ತೀನಾ? ಅದ್ಯಾರೋ ನೋಟಿಸ್ ಕೊಟ್ಟಿದ್ದಾರೆ. ನಾನು ಆರೋಪ ಮಾಡಿರೋದು ಸರ್ಕಾರದ ಮೇಲೆ. ಯಾರೋ ನೋಟಿಸ್ ಕೊಟ್ಟರೆ ಏನ್ ಪ್ರಯೋಜನ ಎಂದು ಕುಟುಕಿದ್ದಾರೆ.
ಸಿದ್ದರಾಮಯ್ಯ ಹೂಬ್ಲೋಟ್ ವಾಚ್ ವಿವಾದ ಮುಗಿದು ಹೋದ ಕಥೆ. ಮತ್ಯಾಕೆ ಅದು? ನಾನು ಯಡಿಯೂರಪ್ಪರ ಹಳೇ ಕೇಸ್ ಬಗ್ಗೆ ಮಾತಾಡ್ಲಾ? ಎಂದು ಬಿಜೆಪಿ ನಾಯಕರಿಗೆ ತಿರುಗೇಟು ನೀಡಿದರು.
ವಾಚ್ ವಿಚಾರ ಮುಗಿದು ಹೋಗಿದೆ. ನಾನು ಸರ್ಕಾರಕ್ಕೆ ಆ ವಾಚ್ ವಾಪಸ್ ಕೊಟ್ಟಿದ್ದೇನೆ. ಎಸಿಬಿ ತನಿಖೆ ಆಗಿ ಕ್ಲೀನ್ ಚಿಟ್ ಸಿಕ್ಕಿದೆ. ನಾನೇನು ವಾಚ್ ಸರ್ಕಾರದ ದುಡ್ಡಿನಿಂದ ತೆಗೆದುಕೊಂಡಿದ್ನಾ? ಸರ್ಕಾರದಿಂದ ಲೂಟಿ ಮಾಡಿದ ದುಡ್ದಿನಿಂದ ವಾಚ್ ಖರೀದಿಸಿದ್ನಾ? ಅದನ್ನು ಯಾರೋ ಕೊಟ್ಟಿದ್ರು. ಅದಕ್ಕೆ ಅವರು ಅಫಿಡವಿಟ್ ಕೊಟ್ಟಿದ್ದಾರೆ. ಈಗ ಆ ವಿಷಯ ಮತ್ಯಾಕೆ ತೆಗೆದಿದ್ದಾರೆ. ಇದು ಜನರನ್ನು ದಾರಿ ತಪ್ಪಿಸುವ ಕೆಲಸ. ನಾನು ವಾಚ್ ಪ್ರಕರಣದ ಬಗ್ಗೆ ಮಾತನಾಡಲ್ಲ ಎಂದರು.
ಜೈಲಿಗೆ ಹೋಗಿ ಬಂದ ಡಿಕೆಶಿ ಪಕ್ಕದಲ್ಲಿ ಸಿದ್ದರಾಮಯ್ಯ ಕುಳಿತಿದ್ದಾರೆ ಎಂಬ ಬಿಜೆಪಿ ನಾಯಕರ ಹೇಳಿಕೆಗೆ ಉತ್ತರಿಸಿದ ಸಿದ್ದರಾಮಯ್ಯ, ಇವರಿಗೇನು ಬಹಳ ನೈತಿಕತೆ ಇದ್ಯಾ? ನಾನೀಗ ಅದರ ಬಗ್ಗೆ ಮಾತನಾಡಲ್ಲ. ಡಿಕೆಶಿ ತಪ್ಪಿತಸ್ಥ ಅಂತ ತೀರ್ಮಾನ ಆಗಿದ್ಯಾ? ಅದು ರಾಜಕೀಯ ದುರುದ್ದೇಶದಿಂದ ಹಾಕಿರುವ ಕೇಸ್. ಅವರಿಗೆ ಜಾಮೀನು ಕೊಟ್ಟಿದ್ದಾರೆ. ಆ ಬಗ್ಗೆ ನಾನು ಮಾತನಾಡಲ್ಲ. ಈ ಸಂದರ್ಭದಲ್ಲಿ ಅದರ ಅವಶ್ಯಕತೆ ಇಲ್ಲ ಎಂದು ಹೇಳಿದರು.