ಮೈಸೂರು: ಮಾಜಿ ಸಿಎಂ ಸಿದ್ದರಾಮಯ್ಯ ಹಾಗೂ ಜಿ.ಟಿ.ದೇವೇಗೌಡ ಇಬ್ಬರೂ ಒಂದು ರೀತಿ ಲವ್ ಬರ್ಡ್ಸ್ನಂತೆ ಎಂದು ಸಚಿವ ಎಸ್.ಟಿ.ಸೋಮಶೇಖರ್ ವ್ಯಂಗ್ಯವಾಡಿದರು. ಸಿದ್ದರಾಮಯ್ಯ ಮುಖ್ಯಮಂತ್ರಿ ಆಗಲಿ ಅಂತಾ ಜಿಟಿಡಿ ಪೂಜೆ ಮಾಡಿದ್ದ ವಿಚಾರವಾಗಿ ಪ್ರತಿಕ್ರಿಯೆ ನೀಡಿದ್ದ ಎಸ್.ಟಿ.ಸೋಮಶೇಖರ್ ಇಬ್ಬರಿಗೂ ಯಾವಾಗ ಲವ್ ಆಗುತ್ತೆ, ಯಾವಾಗ ಡಿವೋರ್ಸ್ ಆಗುತ್ತೆ ಎಂದು ಅವರಿಗೆ ಮಾತ್ರ ಗೊತ್ತು ಎಂದು ಕುಟುಕಿದರು.
ಮೈಸೂರಿನ ಖಾಸಗಿ ಹೋಟೆಲ್ನಲ್ಲಿ ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ಪೂಜೆ ಮಾಡಿದ ತಕ್ಷಣ ಮುಖ್ಯಮಂತ್ರಿ ಆಗಲ್ಲ. ಪೂಜೆ ಮಾಡಿ ಮುಖ್ಯಮಂತ್ರಿ ಆಗೋ ಆಗಿದ್ರೆ, ಎಲ್ಲರೂ ಪೂಜೆ ಮಾಡಿಸ್ತಾ ಇದ್ರು. ದೇವಸ್ಥಾನ ಪೂಜೆಗೆ ಅಹ್ವಾನ ನೀಡಿದ್ದಾರೆ. ಹೀಗಾಗಿ ಅವರು ಜೊತೆಯಾಗಿ ಹೋಗಿದ್ದಾರೆ ಅಷ್ಟೇ ಎಂದರು.
ಮೊದಲ ಪ್ರಾಶಸ್ತ್ಯ ಮತಗಳಲ್ಲೇ ಗೆಲುವು: ವಿಧಾನ ಪರಿಷತ್ ಚುನಾವಣೆ ವಿಚಾರವಾಗಿ ಮಾತನಾಡಿದ ಅವರು ಪ್ರಥಮ ಪ್ರಾಶಸ್ತ್ಯ ಮತಗಳಲ್ಲೇ ಬಿಜೆಪಿ ಅಭ್ಯರ್ಥಿ ಗೆಲ್ಲುತ್ತಾರೆ. ರಘು ಕೌಟಿಲ್ಯ ಈಗಾಗಲೇ ಎಲ್ಲ ಕಡೆ ಪಂಚಾಯಿತಿ ಮಟ್ಟದಲ್ಲಿ ಸುತ್ತಾಡಿ ಬಂದಿದ್ದಾರೆ. ನಾವು ಕೂಡ ಯಾರಿಗೂ ಎರಡನೇ ಪ್ರಾಶಸ್ತ್ಯ ಮತ ಕೇಳ್ತಿಲ್ಲ. ಮೊದಲ ಪ್ರಾಶಸ್ತ್ಯ ಮತಗಳಲ್ಲೇ ಗೆಲ್ಲುವುದು ನಮ್ಮ ಗುರಿ ಎಂದರು.
ಯಡಿಯೂರಪ್ಪ ಚುನಾವಣೆಗಳಲ್ಲಿ ಜೆಡಿಎಸ್ ಬೆಂಬಲ ಕೋರುತ್ತಿರುವ ವಿಚಾರವಾಗಿ ಪ್ರತಿಕ್ರಿಯೆ ನೀಡಿದ ಸೋಮಶೇಖರ್, ಎಲ್ಲೆಲ್ಲಿ ಜೆಡಿಎಸ್ ಅಭ್ಯರ್ಥಿ ಹಾಕಿಲ್ಲ ಅಂತಹ ಕಡೆಗಳಲ್ಲಿ ಮಾತ್ರ ಕೇಳ್ತಿದ್ದಾರೆ. ಮೈಸೂರಿನಲ್ಲಿ ಜೆಡಿಎಸ್ ಅಭ್ಯರ್ಥಿ ಕೂಡ ಇರೋದ್ರಿಂದ ಆ ಪ್ರಶ್ನೆ ಬರಲ್ಲ. ಇಲ್ಲಿ ಜೆಡಿಎಸ್ ಸಹಕಾರ ಕೋರುವ ವಿಚಾರ ನಮ್ಮ ಮುಂದಿಲ್ಲ ಎಂದು ತಿಳಿಸಿದರು.
ಅಗತ್ಯ ಬಿದ್ದಾಗ ದಾಖಲೆಗಳ ಬಹಿರಂಗ: ಜೆಡಿಎಸ್ ಅಭ್ಯರ್ಥಿ ಮಂಜೇಗೌಡ ವಿರುದ್ದ ತಾವು ಮಾಡಿರೋ ಆರೋಪಕ್ಕೆ ಈಗಲೂ ಬದ್ಧ. ಅಗತ್ಯ ಬಿದ್ದಾಗ ಅವರು ಮಾಡಿರೋ ಅಕ್ರಮದ ದಾಖಲೆಗಳನ್ನ ಹೊರಹಾಕ್ತೇನೆ. ಮಂಜೇಗೌಡ ಬರೆದಿರೋ ಪತ್ರ ನನ್ನ ಕೈ ಸೇರಿಲ್ಲ. ಪತ್ರ ಬಂದ ಬಳಿಕ ನಾನು ಉತ್ತರಿಸುತ್ತೇನೆ ಎಂದು ಹೇಳಿದರು.
ಇದನ್ನೂ ಓದಿ: ಸಿದ್ದರಾಮಯ್ಯ ರಕ್ತದ ಕಣಕಣದಲ್ಲೂ ಮೋಸ ಇದೆ : ಸಚಿವ ಈಶ್ವರಪ್ಪ ವಾಗ್ದಾಳಿ