ಮೈಸೂರು: ಹಳೆಯ ದ್ವೇಷದ ಹಿನ್ನೆಲೆಯಲ್ಲಿ ವ್ಯಕ್ತಿಯ ಮೇಲೆ ಗುಂಪೊಂದು ಮಾರಣಾಂತಿಕ ಹಲ್ಲೆ ನಡೆಸಿದ ಘಟನೆ ಹುಣಸೂರು ತಾಲೂಕಿನ ಬಿಳಿಗೆರೆ ಗ್ರಾಮದಲ್ಲಿ ನಡೆದಿದ್ದು, ಪ್ರಕರಣ ತಡವಾಗಿ ಬೆಳಕಿಗೆ ಬಂದಿದೆ.
ಬಿಳಿಗೆರೆ ಗ್ರಾಮದ ಮಂಜು ಹಲ್ಲೆಗೊಳಗಾದವರು. ಫೆ.23 ರಂದು ಮಂಜು ಗ್ರಾಮದಲ್ಲಿ ನಡೆಸಲು ಉದ್ದೇಶಿಸಿರುವ ನಾಟಕದ ತರಬೇತಿ ಪಡೆಯುತ್ತಿದ್ದಾಗ, ಆ ಸ್ಥಳಕ್ಕೆ ಬಂದ ಗ್ರಾಮ ಪಂಚಾಯತ್ ಸದಸ್ಯ ಪ್ರಭಾಕರ್, ಆತನ ಸ್ನೇಹಿತರಾದ ಸುನೀಲ್, ಹರೀಶ್, ಸ್ವಾಮಿಗೌಡ ಅನಿಲ್, ವಸಂತ ಎಂಬುವವರು ಮಂಜುವನ್ನು ತರಬೇತಿ ಪಡೆಯಲು ಅಡ್ಡಿ ಮಾಡಿದ್ದಲ್ಲದೇ, ಅಲ್ಲಿಗೆ ಬಂದಿದ್ದಕ್ಕೆ ಆಕ್ಷೇಪ ವ್ಯಕ್ತಪಡಿಸಿದ್ದಾರೆ.
ಈ ವೇಳೆ ಇಬ್ಬರ ಮಧ್ಯೆ ವಾಗ್ವಾದ ನಡೆದು, ಬಳಿಕ ಮಂಜು ಮೇಲೆ 5 ಜನರಿದ್ದ ಗುಂಪು ಹಲ್ಲೆಗೆ ಮುಂದಾದಾಗ ಆತ ತಪ್ಪಿಸಿಕೊಂಡು ಓಡಿ ಹೋಗುತ್ತಿದ್ದ. ಆಗ ಮಂಜುವನ್ನು ಅಟ್ಟಿಸಿಕೊಂಡು ಹೋಗಿ ಹಲ್ಲೆ ಮಾಡಿದ್ದಾರೆ. ಈ ವೇಳೆ ಮಂಜು ಅವರ ತಾಯಿ ಮಗನ ರಕ್ಷಣೆಗೆ ಹೋಗಿದ್ದಾರೆ. ಉದ್ರಿಕ್ತ ಗುಂಪು ತಾಯಿಯ ಮೇಲೂ ಹಲ್ಲೆ ನಡೆಸಿದೆ.
ಇಬ್ಬರ ಮೇಲೆ ಹಲ್ಲೆ ನಡೆಯುತ್ತಿದ್ದರೂ ಜನರು ಮಾತ್ರ ಸಹಾಯಕ್ಕೆ ಧಾವಿಸಿಲ್ಲ. ಗಾಯಗೊಂಡ ಮಂಜು ಮತ್ತು ಅವರ ತಾಯಿ ಹುಣಸೂರಿನ ಸರ್ಕಾರಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಘಟನೆಗೆ ಸಂಬಂಧಿಸಿದಂತೆ ಹುಣಸೂರು ಗ್ರಾಮಾಂತರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಓದಿ: ಪ್ರಬಲ ಭೂಕಂಪಕ್ಕೆ ನಲುಗಿದ ಇಂಡೋನೇಷ್ಯಾ: 7 ಮಂದಿ ಸಾವು, 85 ಜನರಿಗೆ ಗಾಯ