ಮೈಸೂರು: ಕೊರೊನಾ ಭೀಕರತೆ ಹೆಚ್ಚಾಗುತ್ತಿರುವ ಕಾರಣ ಆಷಾಢ ಶುಕ್ರವಾರದ ನಂತರ ಚಾಮುಂಡಿ ಬೆಟ್ಟ ಹಾಗೂ ಉತ್ತನಹಳ್ಳಿ ದೇವಾಲಯಕ್ಕೆ ಪ್ರತಿ ಶನಿವಾರ-ಭಾನುವಾರ ಭಕ್ತಾದಿಗಳಿಗೆ ಪ್ರವೇಶ ನಿರ್ಬಂಧಿಸಲಾಗಿದೆ. ಅರಮನೆಯ ರಾಜ ಕುಟುಂಬದ ಒಂಟೆ ನೋಡಿಕೊಳ್ಳುವ ವ್ಯಕ್ತಿಯ ಮಗನಿಗೆ ಕೊರೊನಾ ತಗುಲಿದ ಕಾರಣ ಮೂರು ದಿನ ಪ್ರವಾಸಿಗರ ಪ್ರವೇಶಕ್ಕೆ ನಿಷೇಧ ಹಾಕಲಾಗಿದೆ.
ಚಾಮುಂಡಿ ಬೆಟ್ಟ ಹಾಗೂ ಉತ್ತನಹಳ್ಳಿ ಶ್ರೀ ಜ್ವಾಲಾತ್ರಿಪುರ ಸುಂದರಮ್ಮಣಿ ದೇವಾಲಯಕ್ಕೆ ಜುಲೈ 10, 11, 12, 13, 14 ಮತ್ತು 17ರಂದು ಸಾರ್ವಜನಿಕರ ಪ್ರವೇಶವನ್ನು ನಿರ್ಬಂಧಿಸಲಾಗಿದೆ.

ಕೊರೊನಾ ಸೋಂಕಿತರ ಸಂಖ್ಯೆ ಹೆಚ್ಚಳವಾಗುತ್ತಿರುವುದರಿಂದ ಬೆಟ್ಟ ಗ್ರಾಮಸ್ಥರ ಅನುಕೂಲಕ್ಕಾಗಿ ಸಾರ್ವಜನಿಕರ ಪ್ರವೇಶ ನಿರ್ಬಂಧಿಸಲಾಗಿದೆ ಎಂದು ಜಿಲ್ಲಾಧಿಕಾರಿ ಅಭಿರಾಮ್ ಜಿ. ಶಂಕರ್ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ಮೂರು ದಿನಗಳ ಕಾಲ ಅರಮನೆ ಪ್ರವೇಶ ನಿಷೇಧ
ಮೈಸೂರು ಅರಮನೆಯ ರಾಜ ಕುಟುಂಬದ ಒಂಟೆಗಳನ್ನು ನೋಡಿಕೊಳ್ಳುವ ವ್ಯಕ್ತಿಯ ಮಗನಿಗೆ ಕೊರೊನಾ ಸೋಂಕು ದೃಢಪಟ್ಟ ಹಿನ್ನೆಲೆಯಲ್ಲಿ ಶುಕ್ರವಾರ, ಶನಿವಾರ ಮತ್ತು ಭಾನುವಾರ ಅರಮನೆಗೆ ಸಾರ್ವಜನಿಕರು ಮತ್ತು ಪ್ರವಾಸಿಗರ ಪ್ರವೇಶಕ್ಕೆ ನಿಷೇಧ ಹೇರಲಾಗಿದೆ.
ಅರಮನೆ ಆವರಣದಲ್ಲಿ ಸ್ಯಾನಿಟೈಸ್ ಮಾಡಲು ತೀರ್ಮಾನಿಸಲಾಗಿರುವ ಕಾರಣ ಈ ನಿರ್ಧಾರ ಕೈಗೊಳ್ಳಲಾಗಿದೆ ಎಂದು ಅರಮನೆ ಆಡಳಿತ ಮಂಡಳಿಯ ಉಪ ನಿರ್ದೇಶಕ ಟಿ.ಎಸ್.ಸುಬ್ರಹ್ಮಣ್ಯ ಈಟಿವಿ ಭಾರತ್ಗೆ ದೂರವಾಣಿ ಮೂಲಕ ತಿಳಿಸಿದ್ದಾರೆ.