ಮೈಸೂರು: ಜೆಡಿಎಸ್‌ನಲ್ಲಿ ಅಪ್ಪ ಮಕ್ಕಳು ಗುದ್ದಾಡಿಕೊಂಡು ನನಗೆ ಟಿಕೆಟ್ ಕೊಡಲಿಲ್ಲ. ಆ ಪಕ್ಷದಿಂದ ನಿಂತರೂ ಸೋಲುತ್ತೇನೆ ಎಂದು ಗೊತ್ತಿದ್ದರಿಂದ ಸ್ಪರ್ಧಿಸಲಿಲ್ಲ ಎಂದು ವಿಧಾನ ಪರಿಷತ್ ಸದಸ್ಯ ಸಂದೇಶ್ ನಾಗರಾಜ್ ತಿಳಿಸಿದರು.
ಇಂದು ವಿಧಾನ ಪರಿಷತ್ ಚುನಾವಣೆಯಲ್ಲಿ ಮೈಸೂರು- ಚಾಮರಾಜನಗರ ದ್ವಿಸದಸ್ಯ ಕ್ಷೇತ್ರದ ಅಭ್ಯರ್ಥಿ ಆಯ್ಕೆಗೆ ಮತದಾನ ಮಾಡಿ ನಂತರ ಮಾತನಾಡಿದ ಅವರು, ಪರಿಷತ್ ಚುನಾವಣೆಗೆ ಸ್ಪರ್ಧಿಸಲು ಬಿಜೆಪಿಯಲ್ಲಿ ಅವಕಾಶ ಸಿಗಲಿಲ್ಲ. ಜೆಡಿಎಸ್ ಪಕ್ಷದಿಂದ ಹಿಂದಿನ ದಿನ ದೇವೇಗೌಡರು ಹಾಗೂ ರೇವಣ್ಣ ಮನೆಗೆ ಬಂದು ಬಿ ಫಾರಂ ಕೊಟ್ಟು ಹೋಗಿದ್ದರು. ಆದರೆ ಮೈಸೂರು ಮಹಾರಾಜರು ಹೇಳಿದ ಹಾಗೇ ಕೇಳಿಕೊಂಡು ಕೊನೆಗೆ ಟಿಕೆಟ್ ಕೊಡಲಿಲ್ಲ. ಮೈಸೂರು ಮಹಾರಾಜರೆಂದರೆ ಜಯಚಾಮರಾಜೇಂದ್ರ ಒಡೆಯರ್ ಕುಟುಂಬದವರು ಅಲ್ಲ. ಅವರು ಯಾರೆಂದು ಜನವರಿ 5 ರಂದು ಜೆಡಿಎಸ್ಗೆ ರಾಜೀನಾಮೆ ನೀಡಿ ಹೇಳುತ್ತೇನೆ ಎಂದರು.
ಜೆಡಿಎಸ್ ಟಿಕೆಟ್ ಸಂದೇಶ್ ನಾಗರಾಜ್ ಹೇಳಿಕೆ:
ನಾ ಹೊಡೆದ ಹಾಗೇ ಹೊಡೀತೀನಿ ನೀ ಅತ್ತ ಹಾಗೇ ಅಳು ಎಂದು ಮಾಡಿದ್ದಾರೆ. ಅವರ ಕುಟುಂಬದ ಜಗಳ ನನಗೆ ಗೊತ್ತಿಲ್ಲ. ಹೆಚ್.ಡಿ.ದೇವೇಗೌಡರು ಮರುದಿನ ಕುಮಾರಸ್ವಾಮಿ ನನ್ನ ಮಗ ಎಂದು ಪ್ರಧಾನಿ ಬಳಿ ಮಾತನಾಡಿದರು. ಅವರ ವ್ಯವಹಾರ ನನಗೆ ಗೊತ್ತಿಲ್ಲ ಎಂದು ಪ್ರತಿಕ್ರಿಯಿಸಿದ ಅವರು, ಪಕ್ಷದಲ್ಲಿ ಅಪ್ಪ ಮಕ್ಕಳು ಗುದ್ದಾಡಿಕೊಂಡು ನನಗೆ ಅವಮಾನ ಮಾಡಿದರು. ನನಗೆ ಜೆಡಿಎಸ್ ನಿಂದ ಸ್ಪರ್ಧಿಸಬೇಕೆಂದಿರಲಿಲ್ಲ. ನಿಂತರೂ ಸೋಲುತ್ತೇನೆ ಎಂದು ಗೊತ್ತಿತ್ತು. ಅದಕ್ಕೆ ನಿಲ್ಲಲಿಲ್ಲ ಎಂದು ಟಿಕೆಟ್ ಕೈ ತಪ್ಪಿದ್ದರ ಬಗ್ಗೆ ಸಂದೇಶ್ ನಾಗರಾಜ್ ಪ್ರತಿಕ್ರಿಯಿಸಿದರು.
ಮಹಾರಾಜರು ಮಂತ್ರಿಗಳು, ಸೇನಾಧಿಪತಿ, ಪ್ರಜೆ, ಸೇವಕರು ಎಲ್ಲಾ ಅವರೇ ಅವರೊಬ್ಬರೇ ಉಳಿದುಕೊಳ್ಳುವುದು. ಅವರೇ ದರ್ಬಾರ್ ನಡೆಸುತ್ತಾರೆ. ಚಿಕ್ಕಮಾದು, ಜಿ.ಟಿ.ದೇವೇಗೌಡರು ಎಲ್ಲಾ ಪಕ್ಷ ಬಿಟ್ಟು ಹೋಗಿರುವುದು ಆ ಮಹಾರಾಜರಿಂದಲೇ ಎಂದು ಹೆಚ್.ಡಿ.ಕುಮಾರಸ್ವಾಮಿ ಅವರಿಗೆ ಪರೋಕ್ಷವಾಗಿ ಟಾಂಗ್ ನೀಡಿದರು.
ಸಂದೇಶ್ ನಾಗರಾಜ್ ರಾಜೀನಾಮೆ:
ಮೈಸೂರು ಮಹಾರಾಜರಿಗೆ ಮುಂದಿನ ಚುನಾವಣೆ ಕಠಿಣ ಎಂದು ಹೇಳುತ್ತಿದ್ದಾರೆ ಎಂಬ ಪ್ರಶ್ನೆಗೆ ಉತ್ತರಿಸಿ, ಅದನ್ನು ಜನ ಮಾಡಿ ತೋರಿಸುತ್ತಾರೆ ಎಂದರು. ಜನವರಿ 5ನೇ ತಾರೀಕು ನನ್ನ ಎಂಎಲ್‌ಸಿ ಅವಧಿ ಮುಗಿಯಲಿದೆ. ಅಂದು ನಾನು ಜೆಡಿಎಸ್ ಪಕ್ಷಕ್ಕೆ ರಾಜೀನಾಮೆ ನೀಡುತ್ತೇನೆ. ಅಂದು ಪತ್ರಿಕಾಗೋಷ್ಠಿ ಕರೆದು ಕೂಲಂಕುಷವಾಗಿ ಮಾತನಾಡುತ್ತೇನೆ. ವಿಧಾನಸಭಾ ಚುನಾವಣೆಯಲ್ಲಿ ಸ್ಪರ್ಧಿಸುವ ಕುರಿತು ಮುಂದೆ ಹೇಳುತ್ತೇನೆ ಎಂದರು.
ನನ್ನನ್ನು ಮುಗಿಸಲು ಸಾಧ್ಯವಿಲ್ಲ:
ಸಂದೇಶ್ ನಾಗರಾಜ್ ಕುಟುಂಬವನ್ನು ರಾಜಕೀಯವಾಗಿ ಮುಗಿಸುವ ತಂತ್ರವೇ? ಎಂಬ ಪ್ರಶ್ನೆಗೆ ಉತ್ತರಿಸಿ, ಯಾರಿಂದಲೂ ಯಾರನ್ನೂ ಮುಗಿಸಲು ಸಾಧ್ಯವಿಲ್ಲ. ನಾವು ಮುಗೀತೀವಾ ಅವರು ಮುಗೀತಾರಾ ಅನ್ನೋದು 5 ನೇ ತಾರೀಖಿನ ಮೇಲೆ ಗೊತ್ತಾಗಲಿದೆ ಎಂದ ಸಂದೇಶ್ ನಾಗರಾಜ್, ಸಕ್ರಿಯ ರಾಜಕಾರಣದಲ್ಲೇ ಇರುತ್ತೇನೆ. ಇಲ್ಲಿಯವರೆಗೆ ಮೈಲ್ಡ್ ರಾಜಕೀಯ ಮಾಡುತ್ತಿದ್ದೆ. ಇನ್ನು ಮುಂದೆ ರಫ್ ರಾಜಕೀಯ ಮಾಡುತ್ತೇನೆ ಎಂದು ತಿಳಿಸಿದರು.
ಕಾಂಗ್ರೆಸ್, ಬಿಜೆಪಿಗೆ ಮತ ಹಾಕಿದ್ದೇನೆ:
ಹೋದ ಬಾರಿ ಚುನಾವಣೆಯಲ್ಲಿ ನನಗೆ ನಾನೇ ಮತ ಹಾಕಿಕೊಂಡಿದ್ದೆ. ಈ ಬಾರಿ ಬೇರೆಯವರಿಗೆ ಹಾಕಿದ್ದೇನೆ. ಸಂತೋಷದಿಂದ ಮತ ಹಾಕಿದ್ದೇನೆ. 6 ಜನರು ಗೆಲ್ಲಲಿ ಎಂದು ಶುಭಾಶಯ ಹೇಳುತ್ತೇನೆ. 6 ಜನರಲ್ಲಿ ಇಬ್ಬರು ಗೆಲ್ಲುತ್ತಾರೆ ಎಂದ ಅವರು, ಕಾಂಗ್ರೆಸ್, ಬಿಜೆಪಿಗೆ ಬೆಂಬಲ ನೀಡಿದ್ದೇನೆ ಎಂದು ಹೇಳಿದರು.