ಮಂಡ್ಯ\ ಮೈಸೂರು: ಕೆಆರ್‌ಎಸ್ ಡ್ಯಾಂನಿಂದ 41,000 ಕ್ಯೂಸೆಕ್ ನೀರು ಬಿಡುಗಡೆ ಹಿನ್ನೆಲೆ ಕಾವೇರಿ ನದಿ ಉಕ್ಕಿ ಹರಿಯುತ್ತಿದೆ. ನದಿ ಪಾತ್ರದ ಪ್ರವಾಸಿತಾಣಗಳಲ್ಲಿ ಪ್ರವಾಹ ಭೀತಿ ಉಂಟಾಗಿದೆ. ಮಂಡ್ಯ ಜಿಲ್ಲೆಯ ಶ್ರೀರಂಗಪಟ್ಟಣ ತಾಲೂಕಿನ ವಿಶ್ವ ಪ್ರಸಿದ್ಧ ರಂಗನತಿಟ್ಟು ಪಕ್ಷಿಧಾಮದಲ್ಲಿ ಬಹುತೇಕ ನಡುಗಡ್ಡೆಗಳು ಭಾಗಶಃ ಮುಳುಗಡೆಯಾಗಿವೆ.
ನೀರಿನ ರಭಸಕ್ಕೆ ಪಕ್ಷಿಗಳ ಗೂಡುಗಳು ಕೊಚ್ಚಿ ಹೋಗಿವೆ. ಮರಗಳ ತುದಿಯಲ್ಲಿ ಗುಂಪು ಗುಂಪಾಗಿ ಕುಳಿತಿರುವ ಪಕ್ಷಿಗಳು ಗೂಡು ರಕ್ಷಣೆ ಮಾಡಿಕೊಳ್ಳಲು ಪರದಾಡುತ್ತಿವೆ. ನಿನ್ನೆಯಿಂದಲೇ ರಂಗನತಿಟ್ಟು ಪಕ್ಷಿಧಾಮದಲ್ಲಿ ಬೋಟಿಂಗ್ ಸಂಪೂರ್ಣ ಬಂದ್ ಆಗಿದೆ.
ಸ್ನಾನ ಘಟ್ಟ ಮುಳುಗಡೆ: ನಿಮಿಷಾಂಬಾ ದೇವಾಲಯದ ಸ್ನಾನಘಟ್ಟ, ಸಂಗಮದಲ್ಲಿ ಭಕ್ತರು ನೀರಿಗೆ ಇಳಿಯದಂತೆ ಬ್ಯಾರಿಕೇಡ್ ಅಳವಡಿಸಲಾಗಿದೆ. ಸ್ನಾನ ಘಟ್ಟದಲ್ಲಿ ಸುಮಾರು 25 ಮೆಟ್ಟಿಲುಗಳು ಮುಳುಗಡೆಯಾಗಿವೆ.
ನದಿ ಪಾತ್ರಕ್ಕೆ ಜನ ಜಾನುವಾರು ಹೋಗದಂತೆ ಆದೇಶ: ಮೈಸೂರಿನಲ್ಲಿ ನಿರಂತರ ಮಳೆಯಾಗುತ್ತಿರುವುದರಿಂದ ಕಪಿಲ ನದಿ ಪಾತ್ರದಲ್ಲಿ ಜನ, ಜಾನುವಾರು ಹೋಗದಂತೆ ನಂಜನಗೂಡು ತಹಶೀಲ್ದಾರ್ ಆದೇಶ ಹೊರಡಿಸಿದ್ದಾರೆ. ಕಪಿಲ ನದಿ ಪಾತ್ರದಲ್ಲಿ ಅತಿ ಹೆಚ್ಚು ಮಳೆಯಾಗುತ್ತಿದ್ದು, ಈಗಾಗಲೇ ನದಿಗೆ ಕಬಿನಿ ಡ್ಯಾಮ್ ನಿಂದ 38 ಸಾವಿರ ಕ್ಯೂಸೆಕ್ ನೀರು ಬಿಡಲಾಗಿದೆ.
ಪರಶುರಾಮ ದೇವಾಲಯ ಜಲ ಬಂಧನ: ನಂಜನಗೂಡಿನ ಐತಿಹಾಸಿಕ ಪರಶುರಾಮ ದೇವಾಲಯ ಜಲ ಬಂಧನವಾಗಿದೆ. ಕಪಿಲಾ ನದಿಯ ಸ್ನಾನಘಟ್ಟದಿಂದ ಅನತಿ ದೂರದಲ್ಲಿರುವ ಪರಶುರಾಮ ದೇವಾಲಯಕ್ಕೆ ಜಲಾಶಯದ ನೀರು ನುಗ್ಗಿ, ದೇವಾಲಯ ಆವರಣ ಸಂಪೂರ್ಣ ಜಲಾವೃತವಾಗಿದೆ. ಹದಿನಾರು ಕಾಲು ಮಂಟಪ ಕೂಡ ಮುಳುಗಡೆಯಾಗಿದೆ.
ಸ್ಥಾನಘಟ್ಟಕ್ಕೆ ಭಕ್ತಾದಿಗಳು ನಿರ್ಬಂಧ: ಕಬಿನಿ ಜಲಾಶಯದಿಂದ ನೀರಿನ ಹೊರ ಹರಿವು ಜಾಸ್ತಿ ಆಗಿರುವುದರಿಂದ, ಕಪಿಲ ಸ್ನಾನಘಟ್ಟ ಸಂಪೂರ್ಣವಾಗಿ ಮುಳುಗಿ ಹೋಗಿದೆ. ಆದ್ದರಿಂದ ಭಕ್ತಾದಿಗಳಿಗೆ ಸ್ನಾನಘಟ್ಟಕ್ಕೆ ನಿರ್ಬಂಧ ವಿಧಿಸಲಾಗಿದೆ.
ಇದನ್ನೂ ಓದಿ : ಡ್ರೋನ್ ಕ್ಯಾಮರಾದಲ್ಲಿ ಸೆರೆಯಾದ ಜೋಗದ ನಯನ ಮನೋಹರ ದೃಶ್ಯ : ವಿಡಿಯೋ ವೈರಲ್