ಮೈಸೂರು: ಮಹಿಷ ದಸರಾ ಆಚರಣೆಗೆ ಜಿಲ್ಲಾಡಳಿತ ಮತ್ತು ಸರ್ಕಾರ ಅನುಮತಿ ನೀಡದ ಹಿನ್ನೆಲೆ ಆಕ್ರೋಶ ವ್ಯಕ್ತಪಡಿಸಿರುವ ಪ್ರಗತಿಪರ ಚಿಂತಕ ಪ್ರೋ. ಮಹೇಶ್ ಚಂದ್ರಗುರು ಬಸವರಾಜ ಬೊಮ್ಮಾಯಿ ಮುಖ್ಯಮಂತ್ರಿ ಸ್ಥಾನಕ್ಕೆ ಅನರ್ಹರು ಎಂದು ಕಿಡಿಕಾರಿದ್ದಾರೆ.
ನಗರದದಲ್ಲಿಂದು ಮಾಧ್ಯಮಗೋಷ್ಟಿಯಲ್ಲಿ ಮಾತನಾಡಿದ ಅವರು, ಬಸವರಾಜ ಬೊಮ್ಮಾಯಿ ಮುಖ್ಯಮಂತ್ರಿ ಆಗಲು ಅನರ್ಹರು. ಯಾಕಂದ್ರೆ ಸಂವಿಧಾನದ ಮೇಲೆ ಅವರಿಗೆ ಗೌರವ ಇಲ್ಲ. ಸಂವಿಧಾನದ ಜ್ಞಾನವೂ ಅವರಿಗಿಲ್ಲ. ನಮ್ಮ ಮತಗಳು ಬೇಕು, ನಮ್ಮ ಸಂಸ್ಕೃತಿ ಬೇಡವೇ. ನಮ್ಮ ಮೂಲ ನಿವಾಸಿಗಳು ಬೇಡವೇ ಎಂದು ಪ್ರಶ್ನಿಸಿದರು.
ನಾಡ ದೇವತೆ ಚಾಮುಂಡೇಶ್ವರಿ ಅಲ್ಲ: ಮೈಸೂರಿನ ಜಿಲ್ಲಾಧಿಕಾರಿಗೆ ಕಾನೂನಿನ ಅರಿವು ಇಲ್ಲವೇ?. ದಸರಾ ಆಚರಣೆಗೆ ಕಾನೂನಾತ್ಮಕ ಅನುಮತಿ ನೀಡದಿರುವುದು ಕಾನೂನು ಬಾಹಿರ. ನಾಡ ಅದಿದೇವತೆ ಚಾಮುಂಡೇಶ್ವರಿ ಅಲ್ಲ, ಭುವನೇಶ್ವರಿ ಎಂದು ಮಹೇಶ್ ಚಂದ್ರಗುರು ವಾಗ್ದಾಳಿ ನಡೆಸಿದರು.
ಭೇಟಿಗೆ ಸಿಗುತ್ತಿಲ್ಲ: ಮಹಿಷ ದಸರಾ ಆಚರಣೆ ಸಮಿತಿ ಸಂಚಾಲಕ ಪುರುಷೋತ್ತಮ್ ಮಾತನಾಡಿ, ಜಿಲ್ಲಾಧಿಕಾರಿ ಹಾಗೂ ಪೊಲೀಸ್ ಆಯುಕ್ತರಿಗೆ ಮಹಿಷ ದಸರಾ ಆಚರಣೆಗೆ ಅವಕಾಶ ಕೋರಿ ಮನವಿ ಸಲ್ಲಿಸಲಾಗಿತ್ತು. ಕಳೆದ ನಾಲ್ಕೈದು ದಿನಗಳಿಂದ ಡಿಸಿ ಭೇಟಿಗೆ ಪ್ರಯತ್ನ ಮಾಡುತ್ತಿದ್ದೇವೆ. ಆದರೆ ಅವರು ಸಿಗುತ್ತಿಲ್ಲ. 20 ಜನಕ್ಕೆ ಪುಷ್ಪಾರ್ಚನೆಗೆ ಅವಕಾಶ ಕೇಳಿದ್ದವು. ಆದರೆ ಜಿಲ್ಲಾಡಳಿತದಿಂದ ಯಾವುದೇ ಮಾಹಿತಿ ಲಭ್ಯವಾಗಿಲ್ಲ ಎಂದರು.
ಯಾವುದೇ ಧಾರ್ಮಿಕ ಆಚರಣೆಗೆ ಅಡ್ಡಿಪಡಿಸಬಾರದು ಎಂಬುದು ಕಾನೂನು. ಐಎಎಸ್, ಐಪಿಎಸ್ ಅಧಿಕಾರಿಗಳು ನೀವು ಸಂವಿಧಾನ ಓದಿದ್ದರೆ ನಮಗೆ ಅನುಮತಿ ಕೊಡಬೇಕಿತ್ತು. ಯಾರು ನಿಮಗೆ ಐಎಎಸ್ ಸರ್ಟಿಫಿಕೇಟ್ ಕೊಟ್ರೊ ಗೊತ್ತಿಲ್ಲ. ನೀವು ಜನರ ಸೇವೆ ಸಲ್ಲಿಸಬೇಕಾದವರು. ಏಕಮುಖವಾಗಿ ಅಧಿಕಾರ ನಡೆಸಿದರೆ ರಾಜೀನಾಮೆ ನೀಡುವುದು ಸೂಕ್ತ ಎಂದು ಕಿಡಿಕಾರಿದರು.
ದೊಣ್ಣೆ ನಾಯಕನ ಅಪ್ಪಣೆ ಬೇಕಿಲ್ಲ : ಮಹಿಷ ದಸರಾ ಆಚರಣೆಗೆ ದೊಣ್ಣೆ ನಾಯಕನ ಅಪ್ಪಣೆ ಬೇಕಿಲ್ಲ. ನಾಳೆ ಜಿಲ್ಲೆಯಾದ್ಯಂತ ಮಹಿಷ ದಸರಾ ಆಚರಿಸುತ್ತೇವೆ. ಮಂಗಳವಾರ ಬೆಳಗ್ಗೆ 10.30ಕ್ಕೆ ಅಶೋಕ ಪುರಂ ಉದ್ಯಾನವನದಲ್ಲಿ ಮಹಿಷನಿಗೆ ಪುಷ್ಪಾರ್ಚನೆ ಮಾಡುತ್ತೇವೆ. ಬೆಳಗ್ಗೆ 9ಕ್ಕೆ ಅಶೋಕ ವೃತ್ತದ ಬುದ್ದ ವಿಹಾರ ಹೊರಭಾಗದಿಂದ ಮೆರವಣಿಗೆ ಹೊರಡಲಿದೆ ಎಂದು ತಿಳಿಸಿದರು.