ಮೈಸೂರು: ಮುಂದಿನ ವರ್ಷ ಮೇ ತಿಂಗಳಿನಲ್ಲಿ ಚುನಾವಣೆ ನಡೆಯುತ್ತದೆ. ಅದಕ್ಕೂ ಮೊದಲು ಅಂದ್ರೆ ಅವಧಿಗೆ ಮುನ್ನ ಚುನಾವಣೆ ನಡೆಯುವುದಿಲ್ಲ ಎಂದು ಮೈಸೂರು ಜಿಲ್ಲಾ ಉಸ್ತುವಾರಿ ಸಚಿವ ಎಸ್.ಟಿ. ಸೋಮಶೇಖರ್ ಹೇಳಿಕೆ ನೀಡಿದರು.
ಕಾರ್ಯಕ್ರಮದಲ್ಲಿ ಭಾಗವಹಿಸಿದ ಬಳಿಕ ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ಚುನಾವಣೆಗೆ ಇನ್ನೂ ಒಂದು ವರ್ಷ ಬಾಕಿ ಇದೆ, ಅವಧಿಗೆ ಮುನ್ನ ಚುನಾವಣೆ ನಡೆಯುವುದಿಲ್ಲ. ನನಗಿರುವ ಮಾಹಿತಿ ಪ್ರಕಾರ ಮುಂದಿನ ವರ್ಷ ಮೇ ತಿಂಗಳಿನಲ್ಲಿ ಚುನಾವಣೆ ನಡೆಯುತ್ತದೆ. ನಾವೆಲ್ಲರೂ ಈಗ ಬಿಜೆಪಿ ಶಾಸಕರಾಗಿದ್ದು, ಮುಂದೆ ನಾವೆಲ್ಲ ಬಿಜೆಪಿಯಿಂದಲೇ ಸ್ಪರ್ಧಿಸುತ್ತೇವೆ. ಇದರಲ್ಲಿ ಯಾವುದೇ ಅನುಮಾನ ಬೇಡ. ನಾವೆಲ್ಲರೂ ಈಗ ಬಿಜೆಪಿಯಲ್ಲೇ ಇದ್ದೇವೆ, ಮುಂದೆಯೂ ಇರುತ್ತೇವೆ ಎಂದು ಸ್ಪಷ್ಟಪಡಿಸಿದರು.
ಸಂಪುಟ ಪುನಾರಚನೆ ಬಗ್ಗೆ ಮಾತನಾಡಲು ನಾನು ಸಾಮಾನ್ಯ ಸಚಿವ ಅಷ್ಟೇ. ನೀವು ಸಿಎಂಗೆ ಕೇಳುವ ಪ್ರಶ್ನೆಯನ್ನ ನನಗೆ ಕೇಳುತ್ತಿದ್ದೀರಿ. ನಾನು ಮೈಸೂರು ಜಿಲ್ಲಾ ಉಸ್ತುವಾರಿಯಿಂದ ವಿಮುಕ್ತನಾಗುವುದಿಲ್ಲ. ವಾರದಲ್ಲಿ ಎರಡು ದಿನ ಇಲ್ಲೇ ಇರುತ್ತೇನೆ ಎಂದರು.
ಈ ಬಾರಿ ಬಜೆಟ್ ನಲ್ಲಿ ಕೆ.ಆರ್. ಆಸ್ಪತ್ರೆ ನವೀಕರಣಕ್ಕೆ ೮೯ ಕೋಟಿ ಬಿಡುಗಡೆಯಾಗಿದೆ. ಇದರ ಕ್ರೆಡಿಟ್ ತೆಗೆದುಕೊಳ್ಳಲು ಸಂಸದ ಪ್ರತಾಪ್ ಸಿಂಹ ಹಾಗೂ ಶಾಸಕ ಎಲ್.ನಾಗೇಂದ್ರ ನಡುವೆ ಕ್ರೆಡಿಟ್ ವಾರ್ ನಡೆಯುತ್ತಿದೆ ಎಂಬ ಬಗ್ಗೆ ಪ್ರತಿಕ್ರಿಯಿಸಿದ ಸಚಿವರು, ಕ್ರೆಡಿಟ್ ಬಗ್ಗೆ ಇಬ್ಬರು ಮಾತನಾಡುತ್ತಿರುವುದು ತಪ್ಪಲ್ಲ. ಕ್ರೆಡಿಟ್ ಇಬ್ಬರಿಗೂ ಸಲ್ಲಬೇಕು. ಬಜೆಟ್ ಅನುದಾನ ಬಿಡುಗಡೆಯಾದ ನಂತರ ಕೆಲಸ ಆರಂಭಿಸೋಣ ಎಂದು ಸಚಿವ ಸೋಮಶೇಖರ್ ಇದೇ ವೇಳೆ ಹೇಳಿದ್ದಾರೆ.
ಓದಿ : ಕೂದಲು ಕಸಿ ಮಾಡಿಸಿಕೊಂಡ ಮರುದಿನವೇ ಕಾನ್ಸ್ಟೇಬಲ್ ಸಾವು.. 2 ತಿಂಗಳಲ್ಲಿ ಮದುವೆಯಾಗಬೇಕಿದ್ದ ಪೊಲೀಸ್ ಇನ್ನಿಲ್ಲ!