ಮೈಸೂರು/ಮಂಗಳೂರು/ಕಲಬುರಗಿ/ಕೆ.ಆರ್.ಪುರ: ಒಮಿಕ್ರಾನ್ ಭೀತಿಯಿಂದಾಗಿ ರಾಜ್ಯ ಸರ್ಕಾರ ನಿನ್ನೆಯಿಂದ ಹತ್ತು ದಿನಗಳ ಕಾಲ ನೈಟ್ ಕರ್ಫ್ಯೂ ಜಾರಿಗೊಳಿಸಿದೆ. ಮೈಸೂರು, ಮಂಗಳೂರು, ಕಲಬುರಗಿ ಹಾಗು ಕೆ.ಆರ್.ಪುರದಲ್ಲಿ ನಿಯಮ ಉಲ್ಲಂಘಿಸಿ ಅನಗತ್ಯ ಸಂಚಾರ ನಡೆಸಿದ ವಾಹನ ಸವಾರರಿಗೆ ಪೊಲೀಸರು ಬಿಸಿ ಮುಟ್ಟಿಸಿದರು.
ಮೈಸೂರಿನಲ್ಲಿ ಹೇಗಿತ್ತು ನೈಟ್ ಕರ್ಫ್ಯೂ?:
ಮೈಸೂರಿನಲ್ಲಿ ಕಟ್ಟುನಿಟ್ಟಿನ ನೈಟ್ ಕರ್ಫ್ಯೂ ಜಾರಿಗೆ ಪೊಲೀಸ್ ಇಲಾಖೆ ಪಣತೊಟ್ಟಿದ್ದು,ಅಶ್ವಾರೋಹಿ ದಳದೊಂದಿಗೆ ನಗರ ಪೊಲೀಸ್ ಆಯುಕ್ತ ಡಾ.ಚಂದ್ರಗುಪ್ತ ಸಿಟಿ ರೌಂಡ್ಸ್ ಹಾಕಿದರು. ನಗರದ ಪ್ರಮುಖ ರಸ್ತೆಗಳಲ್ಲಿ ಬ್ಯಾರಿಕೇಡ್ ಅಳವಡಿಕೆ ಮಾಡಲಾಗಿದೆ. ಅನವಶ್ಯಕವಾಗಿ ರಸ್ತೆಗಿಳಿಯುವ ವಾಹನಗಳ ತಪಾಸಣೆ ನಡೆಸಲಾಗುತ್ತಿದೆ. ವೈದ್ಯಕೀಯ ಸೇವೆ ಹೊರತುಪಡಿಸಿ ಎಲ್ಲಾ ಚಟುವಟಿಕೆಗಳಿಗೂ ಬ್ರೇಕ್ ಹಾಕಲಾಗಿದೆ.
ಮಂಗಳೂರಿನಲ್ಲಿ ನೈಟ್ ಕರ್ಫ್ಯೂ ಜಾರಿ:
ಮಂಗಳೂರು ನಗರ ಪೊಲೀಸ್ ಕಮೀಷನರೇಟ್ ವ್ಯಾಪ್ತಿಯಲ್ಲಿ ಆಯಕಟ್ಟಿನ ಸ್ಥಳಗಳಲ್ಲಿ ಪೊಲೀಸರು ಬ್ಯಾರಿಕೇಡ್ಗಳನ್ನು ಹಾಕಿ ಪರಿಶೀಲನೆ ನಡೆಸಿದರು. ವಾಹನಗಳಲ್ಲಿ ಸುಮ್ಮನೆ ಓಡಾಟ ನಡೆಸುತ್ತಿದ್ದವರನ್ನು ಹಿಂದಕ್ಕೆ ಕಳುಹಿಸುತ್ತಿರುವ ದೃಶ್ಯ ಕಂಡುಬಂತು. ರಾತ್ರಿ 10 ಗಂಟೆಯ ಬಳಿಕ ಓಡಾಟ ನಡೆಸುತ್ತಿದ್ದ ಕಾರು, ಬೈಕ್, ರಿಕ್ಷಾಗಳನ್ನು ಪೊಲೀಸರು ತಡೆದು ತಪಾಸಣೆ ನಡೆಸಿದರು.
ಕಲಬುರಗಿಯಲ್ಲಿ ಡಿಸಿಪಿ ಸಿಟಿ ರೌಂಡ್ಸ್:
ನೈಟ್ ಕರ್ಫ್ಯೂ ಹಿನ್ನೆಲೆಯಲ್ಲಿ ಖುದ್ದು ಡಿಸಿಪಿ ಆಡೂರು ಶ್ರೀನಿವಾಸಲು ಅವರು ನಗರ ಪ್ರದಕ್ಷಿಣೆ ಹಾಕಿದರು. ಯಾರೂ ಕೂಡಾ ಸುಖಾಸುಮ್ಮನೆ ಓಡಾಡಬೇಡಿ, ಮನೆಯಲ್ಲೇ ಇದ್ದು ಕೊರೊನಾ ಹರಡದಂತೆ ಸಹಕರಿಸಿ ಎಂದು ಜನರಲ್ಲಿ ಮನವಿ ಮಾಡಿದರು.
ಈ ಸಂದರ್ಭದಲ್ಲಿ ಪೊಲೀಸರಿಗೂ ಸೂಚನೆ ನೀಡಿದ ಅವರು, ಯಾರ ಮೇಲೂ ಲಾಠಿ ಪ್ರಯೋಗ ಮಾಡಬೇಡಿ, ಅಂಗಡಿಗಳು ತೆರೆದಿದ್ರೆ ತಿಳಿವಳಿಕೆ ಹೇಳಿ ಬಂದ್ ಮಾಡಿಸಿ. ಇಲ್ಲದಿದ್ದರೆ ಒಂದು ಫೋಟೋ ತೆಗೆದು ಕಂಟ್ರೋಲ್ ರೂಮ್ಗೆ ಕಳುಹಿಸಿ ಕೇಸ್ ದಾಖಲಿಸಿ, ಕ್ರಮ ಕೈಗೊಳ್ಳಿ ಎಂದರು.
ನಿಯಮ ಗಾಳಿಗೆ ತೂರಿದ ಸವಾರರು:
ಕೆ.ಆರ್.ಪುರದಲ್ಲಿ ಪೊಲೀಸರು ರಾತ್ರಿ 10 ಗಂಟೆಯ ನಂತರ ತೆರದಿದ್ದ ಅಂಗಡಿಗಳನ್ನು ಬಂದ್ ಮಾಡಿಸಿದರು. ಇನ್ನೂ ಕೆಲವೆಡೆ ವಾಹನ ಸಂಚಾರ ಎಂದಿನಂತಿತ್ತು. ನೈಟ್ ಕರ್ಫ್ಯೂ ಇದ್ದರೂ ವಾಹನ ಸವಾರರು ನಿಯಮ ಗಾಳಿಗೆ ತೂರಿ ಓಡಾಟ ನಡೆಸಿದರು. ಕೆಲವೆಡೆ ಹೋಟೆಲ್ ಮತ್ತು ಬೀದಿಬದಿ ವ್ಯಾಪಾರಿಗಳು ಅರ್ಧ ಅಂಗಡಿ ಬಾಗಿಲು ಮುಚ್ಚಿಸಿಕೊಂಡು ವ್ಯಾಪಾರ ಮಾಡುತ್ತಿದ್ದುದು ಗೋಚರಿಸಿತು.
ಶಿವಮೊಗ್ಗದಲ್ಲೂ ಕಟ್ಟುನಿಟ್ಟಿನ ಕ್ರಮ:
ರಾತ್ರಿ ಕರ್ಪ್ಯೂ ಹಿನ್ನೆಲೆಯಲ್ಲಿ ಶಿವಮೊಗ್ಗದಲ್ಲೂ 10 ಗಂಟೆ ನಂತರ ಅಂಗಡಿ ಮುಂಗಟ್ಟುಗಳು ಸಂಪೂರ್ಣ ಬಂದ್ ಆಗಿತ್ತು. ಆದರೆ ವಾಹನ ಸಂಚಾರ ಎಂದಿನಂತೆ ಇರುವುದು ಕಂಡು ಬಂತು. ಸರ್ಕಾರದ ಮಾರ್ಗಸೂಚಿ ಪಾಲಿಸುವಂತೆ ಜನರಿಗೆ ಜಾಗೃತಿ ಮೂಡಿಸಿದ ಪೊಲೀಸರು ನಿಯಮ ಉಲ್ಲಂಘಿಸುವವರ ಮೇಲೆ ಕಾನೂನು ಕ್ರಮ ಕೈಗೊಳ್ಳಲಾಗುವುದು ಎಂದು ಎಚ್ಚರಿಕೆ ನೀಡಿದರು. ನಗರದ ಮುಖ್ಯ ರಸ್ತೆಗಳಲ್ಲಿ ಬ್ಯಾರಿಕೇಡ್ ಹಾಕಲಾಗಿತ್ತು.
ಹುಬ್ಬಳ್ಳಿಯಲ್ಲಿ ರಸ್ತೆಗಿಳಿದ ಖಾಕಿ:
ನೈಟ್ ಕರ್ಪ್ಯೂ ಹಿನ್ನೆಲೆಯಲ್ಲಿ ಒಂದು ಗಂಟೆಗೆ ಮುಂಚೆಯೇ ಪೊಲೀಸರು ಫೀಲ್ಡ್‌ಗಿಳಿದಿದ್ದು, ನಗರದ ಚೆನ್ನಮ್ಮ ವೃತ್ತದಲ್ಲಿ ವಾಹನ ಸವಾರರಿಗೆ ಎಚ್ಚರಿಕೆ ನೀಡಿದರು. ಬೇಗ ಮನೆಗೆ ತೆರಳುವಂತೆ ಜನರಿಗೆ ಸೂಚನೆ ನೀಡಿದರು. ಸಂಗೊಳ್ಳಿ ರಾಯಣ್ಣ ವೃತ್ತ, ಕೋರ್ಟ್ ವೃತ್ತ, ದಾಜಿಪಾನಪೇಟ್, ಜನತಾ ಬಜಾರ್ಗಳಲ್ಲಿ ಅಂಗಡಿ ಮುಂಗಟ್ಟುಗಳನ್ನು ಬಂದ್ ಮಾಡುವಂತೆ ಪೊಲೀಸರು ತಾಕೀತು ಮಾಡಿದರು.