ಮೈಸೂರು: ಇಂಡಿಯನ್ ಯೂನಿವರ್ಸಿಟಿ ರ‍್ಯಾಕಿಂಗ್ ಪಟ್ಟಿ ಬಿಡುಗಡೆಯಾಗಿದ್ದು, ಮೈಸೂರು ವಿಶ್ವವಿದ್ಯಾನಿಲಯವು ದೇಶದ ವಿಶ್ವವಿದ್ಯಾನಿಲಯಗಳಲ್ಲಿ 21ನೇ ಸ್ಥಾನ ಹಾಗೂ ರಾಜ್ಯದ ವಿವಿಗಳಲ್ಲಿ ಮೊದಲ ಸ್ಥಾನ ಪಡೆದಿದೆ.
ಔಟ್ಲುಕ್ ಹಾಗೂ ಐಸಿಎಆರ್ಇ ನಡೆಸಿದ ಜಂಟಿ ಸರ್ವೆಗಳಲ್ಲಿ ದೇಶದ 75 ವಿವಿಗಳು ಸ್ಥಾನ ಪಡೆದಿದ್ದು, ಅದರಲ್ಲಿ 8 ವಿವಿಗಳು ಕರ್ನಾಟಕದ್ದಾಗಿದೆ. ಇದರಲ್ಲಿ ಮೈಸೂರು ವಿಶ್ವವಿದ್ಯಾನಿಲಯ ದೇಶದ ವಿವಿಗಳಲ್ಲಿ 67.88 ಅಂಕ ಪಡೆದು 21ನೇ ಸ್ಥಾನ ಪಡೆದಿದ್ದರೆ, ರಾಜ್ಯದ 8 ವಿವಿಗಳಲ್ಲಿ ಮೊದಲ ಸ್ಥಾನ ಪಡೆದಿದೆ. ಇದಲ್ಲದೆ ಮಂಗಳೂರು ವಿಶ್ವವಿದ್ಯಾನಿಲಯ 24ನೇ ಸ್ಥಾನ ಪಡೆದಿದೆ. ದೇಶದ 75 ಟಾಪ್ ವಿವಿಗಳಲ್ಲಿ 89. 38 ಅಂಕ ಪಡೆದಿರುವ ಕೋಲ್ಕತ್ತಾದ ಜಾಧವಪುರ ವಿವಿ ಮೊದಲ ಸ್ಥಾನ ಪಡೆದಿದ್ದರೆ, ಚೆನೈ ಅಣ್ಣಾ ಮಲೈ ವಿವಿ 85 ಅಂಕ ಪಡೆದು 2ನೇ ಸ್ಥಾನ ಗಳಿಸಿದೆ.
ಆಯ್ಕೆ ವಿಧಾನ ಹೇಗೆ: ಉತ್ತಮ ಬೋಧಕ ವರ್ಗ, ಶೈಕ್ಷಣಿಕ ಗುಣಮಟ್ಟ, ಉತ್ತಮ ಮೂಲಸೌಕರ್ಯ ಹಾಗೂ ಕ್ಯಾಂಪಸ್ ಸಂದರ್ಶನ ಹಾಗೂ ಸಂಶೋಧನೆಗಳಿಗೆ ಇರುವ ಅವಕಾಶ ಇದರ ಜೊತೆಗೆ ಪ್ರತಿ ವರ್ಷ ಕಾಲೇಜಿನ ಪ್ರಗತಿ, ಬೋಧಕ ಹಾಗೂ ವಿದ್ಯಾರ್ಥಿಗಳ ಅನುಪಾತ, ಪಿಎಚ್ಡಿ ವಿಚಾರದಲ್ಲಿ ಪ್ರಬಂಧ ಮಂಡನೆ ಹಾಗೂ ಅದರ ಗುಣಮಟ್ಟ ಸೇರಿದಂತೆ ವಿವಿಯಲ್ಲಿ ಇರುವ ಮೂಲ ಸೌಲಭ್ಯಗಳನ್ನು ಗಮನದಲ್ಲಿಟ್ಟುಕೊಂಡು ಈ ರ‍್ಯಾಕಿಂಗ್ ಪಟ್ಟಿಯನ್ನು ಪ್ರಕಟಿಸಲಾಗಿದೆ.