ಮೈಸೂರು: ಉಕ್ರೇನ್ನಲ್ಲಿ ರಷ್ಯಾದ ಆಕ್ರಮಣ ಮುಂದುವರಿದಿದೆ. ಮೈಸೂರಿನ ವಿದ್ಯಾರ್ಥಿನಿ ಉಕ್ರೇನ್ನ ಬಂಕರ್ವೊಂದರಲ್ಲಿ ಸಿಲುಕಿದ್ದಾರೆ. ಮೂರು ದಿನಗಳಿಂದ ನೀರು, ಆಹಾರವಿಲ್ಲದೇ ಸಂಕಷ್ಟ ಎದುರಿಸುತ್ತಿದ್ದು, ತಮ್ಮನ್ನು ಭಾರತಕ್ಕೆ ಕರೆಸಿಕೊಳ್ಳುವಂತೆ ಮನವಿ ಮಾಡಿದ್ದಾರೆ.
ಮೈಸೂರಿನ ಎನ್.ಆರ್.ಮೊಹಲ್ಲಾ ನಿವಾಸಿಗಳಾದ ಗಣೇಶ್ ಸಿಂಗ್ ಹಾಗೂ ಅನುರಾಧ ದಂಪತಿ ಪುತ್ರಿ ಜ್ಞಾನಶ್ರೀ ಸಿಂಗ್ ಅವರು ಉಕ್ರೇನ್ನ ವಿ.ಎನ್.ಖರಾಝಿಯಾನ್ ವಿವಿಯಲ್ಲಿ ಮೂರನೇ ವರ್ಷದ ಮೆಡಿಕಲ್ ವ್ಯಾಸಂಗ ಮಾಡುತ್ತಿದ್ದಾರೆ. ಕಳೆದ ಮೂರು ದಿನಗಳಿಂದ ಉಕ್ರೇನ್ನ ಬಂಕರ್ನಲ್ಲಿ ಸಿಲುಕಿದ್ದು, ತಮ್ಮನ್ನು ಬೇಗ ಸ್ಥಳಾಂತರಿಸುವಂತೆ ಎಂಬೆಸಿಗೆ ಮನವಿ ಮಾಡಿದ್ದಾರೆ.
ಮೂರು ದಿನಗಳಿಂದ ಬಂಕರ್ನಲ್ಲಿ ನಾನು ಸೇರಿ ಕೆಲವರು ಸಿಲುಕಿಕೊಂಡಿದ್ದೇವೆ. ಹೊರಗಡೆ ಬಾಂಬ್ ಬ್ಲಾಸ್ಟ್ ಆಗುತ್ತಿರುವ ಸದ್ದು ಕೇಳಿಸುತ್ತಿದೆ. ಆದರೆ ಇಲ್ಲಿ ನಮಗೆ ಸೇಫ್ಟಿ ಇದೆ ಎನ್ನುವ ಕಾರಣಕ್ಕೆ ಇಲ್ಲಿಯೇ ಅಡಗಿ ಕುಳಿತಿದ್ದೇವೆ. ನೀರು ಆಹಾರವಿಲ್ಲದೇ ಪರದಾಡುವಂತಾಗಿದೆ. ಹೊರಗಡೆ ಹೋಗಿ ಊಟ ತರಲೂ ಕೂಡ ಸಾಧ್ಯವಾಗುತ್ತಿಲ್ಲ. ವಾಯುದಾಳಿ ನಡೆಯುತ್ತಿದೆ ಎಂದು ತಮ್ಮ ಅಳಲು ತೋಡಿಕೊಂಡಿದ್ದಾರೆ.
ಇದನ್ನೂ ಓದಿ: ಮೈಸೂರು: ಆಹಾರ ಅರಸಿ ಮನೆಯೊಳಗೆ ನುಗ್ಗಿದ ಚಿರತೆ
ನಾವು ಈಗಾಗಲೇ ಎಂಬೆಸಿಗೆ ಮನವಿ ಮಾಡಿದ್ದೇವೆ. ವಿದ್ಯಾರ್ಥಿಗಳನ್ನು ಸ್ಥಳಾಂತರಿಸುವ ಕೆಲಸ ನಡೆಯುತ್ತಿದೆ, ಸ್ವಲ್ಪ ಸಮಯ ಕಾಯಿರಿ ಎಂದು ಹೇಳುತ್ತಿದ್ದಾರೆ. ಆದರೆ ಈಗ ಸ್ಥಳಾಂತರ ಮಾಡಿರುವ ವಿದ್ಯಾರ್ಥಿಗಳು ವೆಸ್ಟರ್ನ್ ಉಕ್ರೇನ್ ಭಾಗದವರು. ಅದು ಪೋಲ್ಯಾಂಡ್ ಹಾಗೂ ಇತರೆ ದೇಶಗಳ ಗಡಿ ಸಮೀಪವಿದೆ. ಆದರೆ ನಾವು ಈಸ್ಟರ್ನ್ ಉಕ್ರೇನ್ ಭಾಗದಲ್ಲಿ ಇದ್ದೇವೆ. ಇದು ರಷ್ಯಾ ದೇಶದ ಗಡಿ ಭಾಗವಾಗಿದ್ದು, ನಮ್ಮನ್ನು ಸ್ಥಳಾಂತರ ಮಾಡುವುದು ಕಷ್ಟಸಾಧ್ಯ ಎಂದು ವಿಡಿಯೋ ಮೂಲಕ ತಮ್ಮ ಪರಿಸ್ಥಿತಿ ಬಗ್ಗೆ ತಿಳಿಸಿದ್ದಾರೆ.