ಮೈಸೂರು: ಸಿದ್ದರಾಮಯ್ಯನ ಗುಣ ರಾಕೇಶ್ ಸಿದ್ದರಾಮಯ್ಯನಿಗೆ ಇತ್ತಾ? ಎಂದು ಚಾಮರಾಜನಗರ ಸಂಸದ ವಿ.ಶ್ರೀನಿವಾಸ್ ಪ್ರಸಾದ್ ಪ್ರಶ್ನಿಸಿದರು.
ಜಯಲಕ್ಷ್ಮಿಪುರಂನಲ್ಲಿರುವ ತಮ್ಮ ನಿವಾಸದಲ್ಲಿ ಎಸ್.ಆರ್.ಬೊಮ್ಮಾಯಿ ರೀತಿ ಬಸವರಾಜ ಬೊಮ್ಮಾಯಿ ಆಗಲ್ಲ ಎಂಬ ಸಿದ್ದರಾಮಯ್ಯ ಹೇಳಿಕೆಗೆ ಪ್ರತಿಕ್ರಿಯಿಸಿದ ಅವರು, ಸಿದ್ದರಾಮಯ್ಯ ರೀತಿ ಅವರ ಮಗ ರಾಕೇಶ್ ಕೂಡ ಆಗಲಿಲ್ಲ. ರಾಕೇಶ್ ಏನಾದ್ರು ಅಂತಾ ಎಲ್ಲರಿಗೂ ಗೊತ್ತಿದೆ. ಮಾಜಿ ಸಿಎಂ ಆಗಿ ಹೀಗೆಲ್ಲಾ ಹೇಳೋದು ಎಷ್ಟು ಸರಿ?. ಮಹಾತ್ಮ ಗಾಂಧಿ ರೀತಿ ಮಗ ಆಗಲಿಲ್ಲ ಅಂತ ಹೇಳಿದ್ದ ಸಿದ್ದರಾಮಯ್ಯ, ಯಾರನ್ನು ಹೀಗೆ ಹೋಲಿಕೆ ಮಾಡಬಾರದು. ಹಿರಿಯ ರಾಜಕಾರಣಿಗೆ ಇದು ಶೋಭೆಯಲ್ಲ ಎಂದು ಟೀಕಿಸಿದರು.
ಸಂಪುಟ ರಚನೆ ಕುರಿತು ಪ್ರತಿಕ್ರಿಯಿಸಿ, ಬಸವರಾಜ ಬೊಮ್ಮಾಯಿ ಸರ್ಕಾರದ ಸಂಪುಟ ಎಲ್ಲ ಆಯಾಮಗಳಿಂದ ಸಮತೋಲಿತವಾಗಿದೆ. ಜಾತಿವಾರು ಲೆಕ್ಕಾಚಾರದಲ್ಲೂ ಸರಿ ಇದೆ. ಸರ್ಕಾರ ರಚನೆಗಾಗಿ ಕಾಂಗ್ರೆಸ್, ಜೆಡಿಎಸ್ ಬಿಟ್ಟು ಬಂದ ಬಹುತೇಕರಿಗೆ ಮಂತ್ರಿ ಸ್ಥಾನ ನೀಡಲಾಗಿದೆ. ಕೆಲವು ಹೊಸ ಮುಖಗಳಿಗೂ ಮಂತ್ರಿ ಮಂಡಲದಲ್ಲಿ ಅವಕಾಶ ಕೊಟ್ಟಿದ್ದಾರೆ. ಮೈಸೂರು ಭಾಗಕ್ಕೆ ಪ್ರಾತಿನಿಧ್ಯ ದೊರೆಯುವ ನಿರೀಕ್ಷೆಯಿತ್ತು. ಆದರೆ, ಎಲ್ಲವನ್ನೂ ಸರಿದೂಗಿಸುವುದು ಸಾಧ್ಯವಿಲ್ಲ ಎಂದು ಹೇಳಿದರು.
ಇದನ್ನೂ ಓದಿ: ಮಾಜಿ ಸಚಿವ ರೋಷನ್ ಬೇಗ್ ನಿವಾಸದ ಮೇಲೆ ಇಡಿ ಅಧಿಕಾರಿಗಳಿಂದ ದಾಳಿ