ಮೈಸೂರು: ಕೆಆರ್ಎಸ್ ಅಣೆಕಟ್ಟು ಬಿರುಕು ವಿಚಾರವಾಗಿ ಸಂಸದೆ ಸುಮಲತಾ ಅಂಬರೀಶ್ ಹಾಗೂ ಮಾಜಿ ಮುಖ್ಯಮಂತ್ರಿ ಕುಮಾರಸ್ವಾಮಿ ನಡುವೆ ಜಟಾಪಟಿ ನಡೆಯುತ್ತಿದೆ. ಈ ಕುರಿತು ಪ್ರತಿಕ್ರಿಯಿಸಿರುವ ಸಂಸದ ಪ್ರತಾಪ್ ಸಿಂಹ ಅವರು ಮಾಜಿ ಕುಮಾರಸ್ವಾಮಿ ಪರ ಬ್ಯಾಟಿಂಗ್ ಮಾಡಿದ್ದಾರೆ.
ಈ ಕುರಿತು ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ಕೆಆರ್ಎಸ್ ಅಣೆಕಟ್ಟು ಬಿರುಕು ಬಿಟ್ಟಿಲ್ಲ ಎಂದು ಕಾವೇರಿ ನೀರಾವರಿ ನಿಗಮದ ಅಧಿಕಾರಿಗಳೇ ತಿಳಿಸಿದ್ದಾರೆ. ಅಂತಹದರಲ್ಲಿ ಡ್ಯಾಂ ಬಿರುಕು ಬಿಟ್ಟಿದೆ ಅನ್ನೋದು ಸರಿಯಲ್ಲ ಎಂದು ಪರೋಕ್ಷವಾಗಿ ಸಂಸದೆ ಸುಮಲತಾಗೆ ಟಾಂಗ್ ನೀಡಿದರು.
ಅಕ್ರಮ ಗಣಿಗಾರಿಕೆ ಸ್ಥಳಗಳಲ್ಲಿ ಸುಮಲತಾಗೆ ಅಡ್ಡಿ ವಿಚಾರವಾಗಿ ಪ್ರತಿಕ್ರಿಯಿಸಿ, ಅವರ ಹೇಳಿಕೆಯನ್ನೇ ಮಾಧ್ಯಮದವರು ಸತ್ಯ ಎಂದು ಭಾವಿಸಬೇಡಿ. ಸತ್ಯದ ಆಳಕ್ಕೆ ಹೋಗಿ ತಿಳಿದುಕೊಳ್ಳುವ ಮನಸ್ಥಿತಿ ಮಾಧ್ಯಮದವರಿಗೆ ಇರಬೇಕಾಗುತ್ತದೆ. ರಾಜಕೀಯವಾಗಿ ಯಾರು ಏನ್ ಬೇಕಾದರೂ ಹೇಳಿಕೆ ಕೊಡಬಹುದು. ಯಾರು ಕೂಡ ಎಲ್ಲಿಯೂ ಅಡ್ಡಿಪಡಿಸಿಲ್ಲ. ಇದೊಂದು ರಾಜಕೀಯ ಅಷ್ಟೇ ಎಂದು ಲೇವಡಿ ಮಾಡಿದರು.
ಕಾವೇರಿ ನೀರಾವರಿ ನಿಗಮದ ಅಧಿಕಾರಿಗಳ ಜೊತೆ ನಾನು ಮಾತನಾಡಿದ್ದೇನೆ. ಅಲ್ಲಿ ಯಾವುದು ಸಮಸ್ಯೆ ಇಲ್ಲವೆಂದು ಅಧಿಕಾರಿಗಳೇ ನನಗೆ ಮಾಹಿತಿ ನೀಡಿದ್ದಾರೆ. ಈ ಹಿಂದೆ ಕೂಡ ಮೈಸೂರು-ಬೆಂಗಳೂರು ದಶಪಥ ರಸ್ತೆ ಮಾಡುವುದಕ್ಕೂ ಬಿಡಲಿಲ್ಲ. ಸುಳ್ಳು ನೆಪಗಳನ್ನ ಹೇಳಿ ಕೆಲಸ ಮಾಡಲು ಅಡ್ಡಿಪಡಿಸಿದರು ಎಂದು ಸುಮಲತಾ ವಿರುದ್ಧ ಆರೋಪಿಸಿದರು.
ಇದನ್ನೂ ಓದಿ; ಮೋದಿ ಸಂಪುಟದಲ್ಲಿ ರಾಜ್ಯದ ನಾಲ್ವರಿಗೆ ಮಂತ್ರಿಗಿರಿ ಸಿಕ್ಕರೂ ನಿಷ್ಪ್ರಯೋಜಕ: ಸತೀಶ್ ಜಾರಕಿಹೊಳಿ ವ್ಯಂಗ್ಯ