ಮೈಸೂರು: ಜೆಡಿಎಸ್ನವರು ಬಾಗಿಲು ಹಾಕೋದಲ್ಲ, ನಾನೇ ಬಾಗಿಲು ಹಾಕಿ ಬಂದಿದ್ದೇನೆ ಎಂದು ಶಾಸಕ ಜಿ.ಟಿ. ದೇವೇಗೌಡ ಮೈಸೂರಿನಲ್ಲಿ ಸ್ಪಷ್ಟವಾಗಿ ಹೇಳಿದ್ದಾರೆ. ಪರಿಷತ್ ಚುನಾವಣೆ ಹಿನ್ನೆಲೆ ಮತದಾನ ಮಾಡಿದ ಬಳಿಕ ಜಿ.ಟಿ. ದೇವೇಗೌಡರಿಗೆ ಜೆಡಿಎಸ್ ಬಾಗಿಲು ಮುಚ್ಚಿದೆ ಎಂಬ ಮಾಜಿ ಸಿಎಂ ಹೆಚ್.ಡಿ.ಕುಮಾರಸ್ವಾಮಿ ಹೇಳಿಕೆಗೆ ಈ ಪ್ರತಿಕ್ರಿಯೆ ನೀಡಿದ್ದಾರೆ.
ಜೆಡಿಎಸ್ ಜಿಲ್ಲಾಧ್ಯಕ್ಷನನ್ನಾಗಿ ಮಾಡಿಸುತ್ತೇವೆ ಎಂದು ನನ್ನನ್ನು ಕರೆದಿದ್ದರು. ಹೆಚ್.ಡಿ. ದೇವೇಗೌಡರು, ರೇವಣ್ಣ, ಕುಮಾರಸ್ವಾಮಿ, ಜಿಲ್ಲೆಯ ಶಾಸಕರು ನನ್ನನ್ನು ಕರೆಸಿದ್ದರು. ಅಲ್ಲಿ ಹೋದಾಗ ಮೈಸೂರಿನ ನಾಯಕರು ಯಾವ ಕಾರಣಕ್ಕೂ ಮಾಡಲು ಆಗುವುದಿಲ್ಲ ಎಂದರು. ಅದಕ್ಕೆ ನಾನು ಅಧ್ಯಕ್ಷರನ್ನಾಗಿ ಮಾಡಿ ಎಂದು ಕೇಳಿದ್ನಾ? ನೀವ್ಯಾಕೆ ಹೀಗೆಲ್ಲ ಮಾಡುತ್ತೀರಾ ಎಂದು ಅಂದು ಬಾಗಿಲನ್ನು ಹಾಕಿ ಬಂದಿದ್ದೇನೆ. ಈಗ ಬಾಗಿಲು ಹಾಕಿದ್ದಾರಾ? ತೆಗೆದಿದ್ದಾರಾ? ಎಂದು ನೋಡಲು ಸಹ ನಾನು ಅಲ್ಲಿಗೆ ಹೋಗಿಲ್ಲ ಎಂದರು.
ಮೇಲ್ಮನೆ ಚುನಾವಣೆ ಮುಂದಿನ ರಾಜಕೀಯ ಧ್ರುವೀಕರಣಕ್ಕೆ ನಾಂದಿಯೇ ಎಂಬ ಪ್ರಶ್ನೆಗೆ, ವಿಧಾನ ಪರಿಷತ್ನಲ್ಲಿ ಗೆದ್ದಿರುವ ಪಕ್ಷಕ್ಕೆ ಸ್ವಲ್ಪ ಶಕ್ತಿ ಬರುತ್ತದೆ. ಆಶಾಭಾವನೆ ಹುಟ್ಟಿಸುತ್ತದೆ ಎಂದು ಹೇಳಿದರು.
ಸಂದೇಶ್ ನಾಗರಾಜ್ ಫೋನ್ ಮಾಡಿದ್ದರು
ನನಗೆ ಸಂದೇಶ್ ನಾಗರಾಜ್ ಫೋನ್ ಮಾಡಿದ್ದರು. ಬಿ ಫಾರಂ ಮನೆಗೆ ಬಂತು ಅಣ್ಣ ಎಲ್ಲಾ ಮರೆತು ನನ್ನ ಜೊತೆ ಬರಬೇಕು ಎಂದು ಹೇಳಿದರು. ಅದಕ್ಕೆ ನಾನು ನೀವು ಸೀನಿಯರ್ ಇದ್ದೀರಿ. ಖಂಡಿತ ನೀವು ಗೆಲ್ಲುತ್ತೀರಿ. ಇಂದಿನ ವಾತಾವರಣದಲ್ಲಿ ಅಭ್ಯರ್ಥಿಗಳನ್ನು ನೋಡಿದಾಗ ಗೆಲ್ಲುವ ಅವಕಾಶ ಇದೆ. ಖಂಡಿತ ನನ್ನ ಬೆಂಬಲ ನಿಮಗೆ ಇದೆ ಎಂದು ಹೇಳಿದ್ದೆ ಎಂದು ತಿಳಿಸಿದರು.
ವಿಶ್ವನಾಥ್ ರಾಜ್ಯಾಧ್ಯಕ್ಷರಾಗಿದ್ದ ಸಂದರ್ಭದಲ್ಲಿ ನಗರ ಪಾಲಿಕೆ ಚುನಾವಣೆ ನಡೆಯಿತು. ನಾವು ಆ ಕ್ಷೇತ್ರದಲ್ಲಿ ನಿಂತಿದ್ದವರಿಗೆ ಜವಾಬ್ದಾರಿ ಕೊಟ್ಟು, ಅವರು ಹೇಳಿದವರಿಗೆ ಬಿ ಫಾರಂ ನೀಡಿದ್ದೆವು. ಅದಾದ ಮೇಲೆ ಸಂದೇಶ್ ಅವರು ಮಂಜು ಹಾಗೂ ಪುಷ್ಪಾಗೆ ಇನ್ನೊಂದು ಸಿ ಫಾರಂ ಕೊಡಿಸಿದರು. ಅವರ ನಾಯಕರನ್ನು ಅವರ ಕ್ಷೇತ್ರಕ್ಕೆ ಕೂಡ ಕರೆದುಕೊಂಡು ಬಂದರು. ಅವರಿಗೆ ಯಾರ ಮೇಲೆ ಪ್ರೀತಿ ಅಭಿಮಾನ ಇರುತ್ತದೆಯೋ ಅವರ ಪರವಾಗಿ ಕೆಲಸ ಮಾಡುತ್ತಾರೆ ಎಂದು ತಿಳಿಸಿದರು.
ಇದನ್ನೂ ಓದಿ: ಸಿದ್ದರಾಮಯ್ಯ, ಡಿಕೆಶಿಯಂತೆ ನಾನೂ ಸಿಎಂ ಸ್ಥಾನ ಕೇಳೇ ಕೇಳ್ತೇನೆ.. ಶಾಸಕ ಶಾಮನೂರು ಶಿವಶಂಕರಪ್ಪ
ಎಲೆಕ್ಷನ್ನಲ್ಲಿ ಕಾಂಚಾಣದ ಸದ್ದು
ಚುನಾವಣೆಯಲ್ಲಿ ಕಾಂಚಾಣ ಈಗ ಹೆಚ್ಚಾಗಿದೆ. ಗ್ರಾಮ ಪಂಚಾಯಿತಿಯಲ್ಲಿ ಗೆದ್ದಿರುವ ಸದಸ್ಯರಿಗೆ ಧರ್ಮಸ್ಥಳ ಮಂಜುನಾಥ ದೇವರ ಬೆಳ್ಳಿ ಕಾಯಿನ್ ನೀಡಿ, ಅದರೊಳಗೆ ಉಪ್ಪು ಹಾಕಿ, ತಲೆ ಕೂದಲು ಹಾಕಿ ಅದಕ್ಕೆ ನಮಸ್ಕಾರ ಮಾಡಿಸಿ, ಮತ ಹಾಕುವಂತೆ ಹೇಳಿ ಅದನ್ನು ಕೊಡುತ್ತಿದ್ದಾರೆ. ನಮ್ಮ ಜನಪ್ರತಿನಿಧಿಗಳು ಹೇಗಿರಬೇಕೆಂದರೆ ಹೇಗಿರಬೇಕು ಹೇಳಿ ಎಂದು ಪ್ರಶ್ನಿಸಿದರು.
ಮತ ಪತ್ರದಲ್ಲಿ ಹೆಸರು ಮಾತ್ರ ಇದೆ. ಪಕ್ಷದ ಚಿಹ್ನೆ ಇಲ್ಲ. ಹಾಗಾಗಿ ಬುದ್ಧಿವಂತರನ್ನು ಮತದಾರರು ಆಯ್ಕೆ ಮಾಡುತ್ತಾರೆ ಎಂಬ ನಂಬಿಕೆ ಇದೆ. ಚುನಾವಣೆಯ ಸ್ಪರ್ಧಿಗಳು ಎಲ್ಲರೂ ಕೂಡ ಅನುಭವ ಇರುವವರು. ಮತದಾರರು ಕೂಡ ಬುದ್ದಿವಂತರು ಇದ್ದಾರೆ ಎಂದರು.