ಮೈಸೂರು : ಕಾಂಗ್ರೆಸ್ನಲ್ಲಿದ್ದಾಗ ಎಸ್ಬಿಎಂ (ಎಸ್.ಟಿ ಸೋಮಶೇಖರ್ , ಭೈರತಿ ಬಸವರಾಜು ಮತ್ತು ಮುನಿರತ್ನ) ಟೀಂ ಇತ್ತು. ಈಗ ಆ ಟೀಂ ಬಿಜೆಪಿಯಲ್ಲಿ ಇಲ್ಲ ಎಂದು ಸಚಿವ ಎಸ್ ಟಿ ಸೋಮಶೇಖರ್ ಹೇಳಿದರು.
ಹೆಚ್ಡಿಕೋಟೆ ತಾಲೂಕಿನ ಬಾವಲಿ ಚೆಕ್ಪೋಸ್ಟ್ ಪರಿಶೀಲಿಸಿ ನಂತರ ಮಾಧ್ಯಮಗಳೊಂದಿಗೆ ಮಾತನಾಡಿದರು. ಬಿಜೆಪಿಯಲ್ಲಿ ಆ ರೀತಿಯ ಟೀಂ ಇಲ್ಲ. ಇಲ್ಲಿ ಎಲ್ಲವೂ ವೈಯಕ್ತಿಕ ಎಂದು ಹೇಳುವ ಮೂಲಕ, ಮುನಿರತ್ನ ಜತೆಗಿನ ಸ್ನೇಹ ಮುರಿದಿರುವ ಬಗ್ಗೆ ಬಹಿರಂಗ ಪಡಿಸಿದರು.
ಅಸಮಾಧಾನಿತರ ಸಭೆ ವಿಚಾರವಾಗಿಯೂ ಪ್ರತಿಕ್ರಿಯೆ ನೀಡಿದ ಸಚಿವ ಸೋಮಶೇಖರ್, ಯಾರು ಯಾವ ಕಾರಣಕ್ಕೆ ಸಭೆ ಮಾಡಿದರು ಎಂಬುದರ ಬಗ್ಗೆ ತಲೆಕೆಡಿಸಿಕೊಳ್ಳುವುದಿಲ್ಲ. ನನಗೆ ಕೋವಿಡ್ ಹಾಗೂ ಪ್ರವಾಹ ನಿರ್ವಹಣೆ ಜವಾಬ್ದಾರಿ ನೀಡಲಾಗಿದೆ, ಅದರ ಬಗ್ಗೆ ಕೆಲಸ ಮಾಡುತ್ತಿದ್ದೇನೆ ಎಂದರು.
ಸರಳ ದಸರಾ : ಮುಂಬರುವ ವಿಶ್ವ ವಿಖ್ಯಾತ ಮೈಸೂರು ದಸರಾ ಮಹೋತ್ಸವ ವಿಚಾರವಾಗಿ ಪ್ರತಿಕ್ರಿಯಿಸಿ, ದಸರಾವನ್ನು ಯಾವುದೇ ಕಾರಣಕ್ಕೂ ನಿಲ್ಲಿಸುವುದಿಲ್ಲ. ಕಳೆದ ಬಾರಿಯಂತೆ ಸರಳ ದಸರಾ ಆಚರಣೆ ಮಾಡಲಾಗುತ್ತದೆ.
ಕಳೆದ ಬಾರಿ ದಸರಾಗೆ ನೀಡಲಾಗಿದ್ದ 10 ಕೋಟಿ ಅನುದಾನದಲ್ಲಿ 7 ಕೋಟಿ ರೂ. ಉಳಿತಾಯವಾಗಿದೆ. ಅದನ್ನು ಬಳಕೆ ಮಾಡಿಕೊಂಡು ದಸರಾ ಹೇಗೆ ಆಚರಣೆ ಮಾಡಬೇಕು ಎಂಬುದನ್ನು ತೀರ್ಮಾನ ಮಾಡುತ್ತೇವೆ ಎಂದರು.
ವೀಕೆಂಡ್ ಕರ್ಫ್ಯೂಗೆ ನಗರದಲ್ಲಿ ವಿರೋಧ ವಿಚಾರವಾಗಿ ಮಾತನಾಡಿ, ಸಾಕಷ್ಟು ಸಂಘಟನೆಗಳು ನಮ್ಮನ್ನ ಸಂಪರ್ಕ ಮಾಡಿವೆ. ಇಂದು ಸಭೆಯಲ್ಲಿ ಆ ಬಗ್ಗೆ ಚರ್ಚೆ ಮಾಡುತ್ತೇವೆ. ಕೋವಿಡ್ನಿಂದ ಸಾಕಷ್ಟು ಕ್ಷೇತ್ರಕ್ಕೆ ಆರ್ಥಿಕ ಹೊಡೆತ ಬಿದ್ದಿದೆ. ನಾಲ್ಕು ತಿಂಗಳಿಂದ ಹೋಟೆಲ್ ಬಂದ್ ಆಗಿದ್ದವು.
ಸಭೆಯಲ್ಲಿ ಕುಳಿತು ಚರ್ಚೆ ಮಾಡಿ, ಜಿಲ್ಲಾಡಳಿತದಿಂದ ಏನು ವಿನಾಯಿತಿ ಕೊಡಬಹುದು ಎಂದು ಚರ್ಚೆ ಮಾಡುತ್ತೇನೆ. ಆದರೆ, ಮತ್ತೆ ಸಂಪೂರ್ಣ ಲಾಕ್‌ಡೌನ್ ಮಾಡುವ ಚಿಂತನೆ ಸದ್ಯಕ್ಕೆ ಇಲ್ಲ ಎಂದರು. ನನಗೆ ಸಹಕಾರ ಖಾತೆ ಕೊಟ್ಟಿರುವುದಕ್ಕೆ ಖುಷಿ ಇದೆ. 22 ವರ್ಷಗಳಿಂದ ಸಹಕಾರಿ ಕ್ಷೇತ್ರದಲ್ಲಿ ಕೆಲಸ ಮಾಡಿದ್ದೇನೆ. ಸಹಕಾರ ಖಾತೆ ಬಗ್ಗೆ ಅಸಮಾಧಾನ ಇಲ್ಲ ಎಂದರು.