ಮೈಸೂರು: ಖಾತೆಯಲ್ಲಿ ದೊಡ್ಡದು-ಚಿಕ್ಕದು ಎಂಬುದು ಇಲ್ಲ. ನನಗೆ ಕೊಟ್ಟಿರುವ ಖಾತೆ ಬಗ್ಗೆ ಖುಷಿ ಇದೆ. ಖುಷಿಯಿಂದಲೇ ಈ ಖಾತೆಯನ್ನು ಪಡೆದಿದ್ದೇನೆ ಎಂದು ಪಶುಸಂಗೋಪನಾ ಸಚಿವ ಪ್ರಭು ಚವ್ಹಾಣ್ ಸ್ಪಷ್ಟಪಡಿಸಿದರು.
ಸಚಿವರಾದ ಬಳಿಕ ಮೊದಲ ಬಾರಿಗೆ ಚಾಮುಂಡಿ ತಪ್ಪಲಿನಲ್ಲಿರುವ ಸುತ್ತೂರು ಶಾಖಾ ಮಠಕ್ಕೆ ಆಗಮಿಸಿದ ಅವರು ಶ್ರೀಗಳಿಂದ ಆಶೀರ್ವಾದ ಪಡೆದರು. ಬಳಿಕ ಮಾಧ್ಯಮಗಳ ಜತೆ ಮಾತನಾಡಿದ ಪ್ರಭು ಚವ್ಹಾಣ್, ಖಾತೆ ಅಸಮಾಧಾನದ ಬಗ್ಗೆ ಹೈಕಮಾಂಡ್, ಮುಖ್ಯಮಂತ್ರಿ ಹಾಗೂ ಮಾಜಿ ಮುಖ್ಯಮಂತ್ರಿಗಳು ಸರಿಪಡಿಸುತ್ತಾರೆ. ಇದರ ಬಗ್ಗೆ ನಾನು ಮಾತನಾಡುವುದಿಲ್ಲ. ನನಗೆ ಕೊಟ್ಟಿರುವ ಖಾತೆಯ ಬಗ್ಗೆ ಖುಷಿ ಇದೆ. ಕಳೆದ ಬಾರಿ ನೀಡಿದ ಖಾತೆಯನ್ನೇ ಈ ಬಾರಿ ನೀಡಿದ್ದಾರೆ. ಇದು ಖುಷಿ ತಂದಿದೆ ಎಂದರು.
ಪ್ರತಿ ಜಿಲ್ಲೆಯಲ್ಲಿ ಗೋ ಶಾಲೆ: ಗೋಮಾತೆ ರಕ್ಷಣೆ ನಮ್ಮ ಹೊಣೆ. ಆ ಕೆಲಸವನ್ನು ನಾನು ಮಾಡುತ್ತೇನೆ. ಪ್ರತಿ ಜಿಲ್ಲೆಯಲ್ಲಿ ಗೋ ಶಾಲೆ ತೆರೆಯುತ್ತೇವೆ. ಗೋ ಕಾಯ್ದೆಯನ್ನು ಮತ್ತಷ್ಟು ಬಿಗಿಗೊಳಿಸಲಾಗುವುದು. ಕಾಯ್ದೆಯ ವಿರುದ್ಧ ಕೆಲವರು ನ್ಯಾಯಾಲಯಕ್ಕೆ ಹೋಗಿದ್ದಾರೆ. ಇದೆಲ್ಲ ಮುಗಿದ ಮೇಲೆ ಕಾನೂನನ್ನು ಮತ್ತಷ್ಟು ಬಿಗಿಗೊಳಿಸಲಾಗುವುದು ಎಂದು ತಿಳಿಸಿದರು.
ನಾನು ಸಚಿವನಾದ ಮೇಲೆ ಅಕ್ರಮ ಗೋ ಸಾಗಣಿಕೆ ವಿರುದ್ಧ ಹೆಚ್ಚಿನ ಪ್ರಕರಣಗಳನ್ನು ದಾಖಲಿಸಿದ್ದೇವೆ. ಎರಡು ಕೇಸ್ ಹಾಕಿ ದೊಡ್ಡ ಮಟ್ಟದ ದಂಡ ಹಾಕಿದರೆ ಎಲ್ಲಾ ಸರಿ ಹೋಗುತ್ತದೆ ಎಂದು ಇದೇ ಸಂದರ್ಭದಲ್ಲಿ ಹೇಳಿದರು.