ಮೈಸೂರು: ಕೋವಿಡ್ ಲಸಿಕೆ ನೀಡುವ ಸ್ಥಳದಲ್ಲಿ ಹಾಗೂ ಪ್ರಮಾಣ ಪತ್ರದಲ್ಲಿ ಮೋದಿ ಭಾವಚಿತ್ರವನ್ನು ಹಾಕುತ್ತಿರುವುದು ಸರಿಯಲ್ಲ. ಜನರ ತೆರಿಗೆ ಹಣದಿಂದ ಲಸಿಕೆ ನೀಡಲಾಗುತ್ತಿದೆ. ಇದರಲ್ಲಿಯೂ ಸಹ ಬಿಜೆಪಿಯವರು ಪ್ರಚಾರ ಪಡೆಯುತ್ತಿದ್ದಾರೆ. ಬೇಕಿದ್ರೆ ಕೋವಿಡ್ನಿಂದ ಮೃತಪಟ್ಟವರ ಮರಣ ಪ್ರಮಾಣ ಪತ್ರದಲ್ಲಿ ಮೋದಿ ತಮ್ಮ ಭಾವಚಿತ್ರ ಹಾಕಿಸಿಕೊಳ್ಳಲಿ ಎಂದು ಕೆಪಿಸಿಸಿ ಮಾಧ್ಯಮ ವಕ್ತಾರ ಎಮ್.ಲಕ್ಷ್ಮಣ್ ವಾಗ್ದಾಳಿ ನಡೆಸಿದ್ದಾರೆ.
ಕಾಂಗ್ರೆಸ್ ಭವನದಲ್ಲಿ ಮಾಧ್ಯಮಗೋಷ್ಟಿ ಉದ್ದೇಶಿಸಿ ಮಾತನಾಡಿದ ಅವರು, ದೇಶದಲ್ಲಿ ಕೊರೊನಾದಿಂದ ಮೃತಪಟ್ಟವರ ಸಂಖ್ಯೆಯನ್ನು ಸರಿಯಾಗಿ ನೀಡುತ್ತಿಲ್ಲ. ಇದರ ಜೊತೆಗೆ ಮೈಸೂರಿನಲ್ಲಿ ಹಿಂದಿನ ತಿಂಗಳು ಮೃತಪಟ್ಟವರ ಸಾವಿನ ಸಂಖ್ಯೆಯನ್ನು ಮುಚ್ಚಿಟ್ಟು, ಹಳೆಯ ಸಾವಿನ ಲೆಕ್ಕವನ್ನು ನೀಡಲಾಗುತ್ತಿದೆ ಎಂದು ಅಂಕಿ-ಅಂಶ ಬಿಡುಗಡೆ ಮಾಡಿದ್ದಾರೆ. ಆ ಮೂಲಕ ರಾಷ್ಟ್ರಮಟ್ಟದಲ್ಲಿ ಮೈಸೂರಿಗೆ ಕಳಂಕ ತರುವ ಕೆಲಸ ಮಾಡಲಾಗುತ್ತಿದೆ ಎಂದು ಆರೋಪಿಸಿದ್ದಾರೆ.
ರಾಜ್ಯ ಸರ್ಕಾರ ಲಾಕ್‌ಡೌನ್ ಮುಂದುವರೆಸಿ ಕೋವಿಡ್ ಸಂಖ್ಯೆ ಕಡಿಮೆ ಆಗ್ತಿದೆ ಎಂದು ಬಿಂಬಿಸುತ್ತಿದೆ. ಸಂಸದ ಪ್ರತಾಪ್ ಸಿಂಹ ಕಳೆದ 15 ದಿನದಿಂದ ನಾಪತ್ತೆಯಾಗಿದ್ದರು. ಈಗ ಲಸಿಕೆ ಕೊಡುವಾಗ ಫೋಟೋ ಪ್ರಚಾರ ಪಡೆಯಲು ಬಂದಿದ್ದಾರೆ ಎಂದು ಲಕ್ಷ್ಮಣ್ ಕಿಡಿಕಾರಿದರು.