ಮೈಸೂರು: ರಸಗೊಬ್ಬರ ಬೆಲೆ ಏರಿಕೆ ಮಾಡಿ ಕೇಂದ್ರ ಹಾಗೂ ರಾಜ್ಯ ಸರ್ಕಾರಗಳು ಗೋಮುಖ ವ್ಯಾಘ್ರ ನಡವಳಿಕೆ ಮಾಡುತ್ತಿವೆ ಎಂದು ಕಬ್ಬು ಬೆಳೆಗಾರರ ಸಂಘದ ರಾಜ್ಯಾಧ್ಯಕ್ಷ ಕುರುಬೂರು ಶಾಂತಕುಮಾರ್ ಕಿಡಿಕಾರಿದ್ದಾರೆ.
ಯಾವುದೇ ಕಾರಣಕ್ಕೂ ರಸಗೊಬ್ಬರ ಬೆಲೆ ಏರಿಕೆ ಮಾಡುವುದಿಲ್ಲ. ಹಳೆಯ ದರದಲ್ಲಿಯೇ ರಸಗೊಬ್ಬರಗಳು ಮಾರಾಟವಾಗುತ್ತದೆ. ರೈತರಿಗೆ ತೊಂದರೆಯಾಗುವುದಿಲ್ಲ ಎಂದು ಹೇಳುತ್ತಲೇ ಕೇಂದ್ರ ಸಚಿವ ಸದಾನಂದ ಗೌಡ ಹಾಗು ರಾಜ್ಯ ಕೃಷಿ ಸಚಿವ ಬಿ.ಸಿ.ಪಾಟೀಲ್ ರೈತರನ್ನು ಮೋಸಗೊಳಿಸಿದ್ದಾರೆ.
ಹೊಸ ದರ ನಿಗದಿಯಾಗಿದೆ. ಡಿಎಪಿ ಪ್ರತಿ ಚೀಲಕ್ಕೆ 1,200 ರಿಂದ 1,900 ಏರಿಕೆ ಮಾಡಲಾಗಿದೆ. ಹೊಸ ದರ ನಿಗದಿ ಮಾಡಿ ರಸಗೊಬ್ಬರ ಕಂಪನಿಗಳು ಆದೇಶ ಹೊರಡಿಸಿವೆ. ಕೊರೊನಾ ಲಾಕ್ ಡೌನ್ ಸಂಕಷ್ಟದಿಂದ ರೈತರು ಬೆಳೆದ ಉತ್ಪನ್ನಗಳ ಬೆಲೆ ಕುಸಿತದಿಂದಾಗಿ ಹಣ್ಣು, ತರಕಾರಿಗಳನ್ನು ಬೀದಿಯಲ್ಲಿ ಸುರಿಯುತ್ತಿದ್ದಾರೆ. ಖರೀದಿದಾರರು ಇಲ್ಲದ ಕಾರಣ ಕೆಲವು ರೈತರು ಕಟಾವು ಮಾಡದೆ ಹೊಲದಲ್ಲಿಯೇ ಬಿಟ್ಟಿದ್ದಾರೆ. ಸಾಲ ಮಾಡಿದ ರೈತ ಅಂಗೈಯಲ್ಲಿ ಆಕಾಶ ನೋಡುವಂತಾಗಿದೆ ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಕೇಂದ್ರ ಸರ್ಕಾರ ರಸಗೊಬ್ಬರ ಸಬ್ಸಿಡಿಯನ್ನು 1 ಲಕ್ಷ 30 ಸಾವಿರ ಕೋಟಿಯಿಂದ 54 ಸಾವಿರ ಕೋಟಿಗೆ ಇಳಿಕೆ ಮಾಡಿದ ಕಾರಣ ಬೆಲೆ ಏರಿಕೆಯಾಗಿದೆ. ರೈತರ ತಲೆ ಮೇಲೆ ಚಪ್ಪಡಿ ಎಳೆದಿದ್ದಾರೆ. ಕೂಡಲೇ ಬೆಲೆ ಇಳಿಸಲು ಕೇಂದ್ರ ಸರ್ಕಾರ ಕ್ರಮ ಕೈಗೊಳ್ಳಬೇಕು. ಸಚಿವರುಗಳು ಸುಳ್ಳು ಸಂದೇಶಗಳನ್ನು ಬಿತ್ತುವ ಮೂಲಕ ರೈತರನ್ನ ದಾರಿ ತಪ್ಪಿಸುತ್ತಿದ್ದಾರೆ.
ರೈತರು ಎಚ್ಚೆತ್ತುಕೊಂಡು ಸುಳ್ಳು ಹೇಳುವ ಮಂತ್ರಿಗಳಿಗೆ ಮುಖಕ್ಕೆ ಮಂಗಳಾರತಿ ಮಾಡಿ, ಸರಿಯಾದ ಪಾಠ ಕಲಿಸಬೇಕು. ಇನ್ನಾದರೂ ರೈತರು ಎಚ್ಚೆತ್ತುಕೊಂಡು ರಸಗೊಬ್ಬರ ಖರೀದಿ ನಿಲ್ಲಿಸಿ, ತಮ್ಮ-ತಮ್ಮ ಮನೆಗಳಿಗೆ ಬೇಕಾದ ಆಹಾರವನ್ನು ಮಾತ್ರ ಬೆಳೆದುಕೊಂಡರೆ ಆಗ ಸರ್ಕಾರವೇ ರೈತರ ಮನೆ ಬಾಗಿಲಿಗೆ ಬರುತ್ತದೆ ಎಂಬುದನ್ನು ಅರಿತುಕೊಳ್ಳಬೇಕು ಎಂದು ಎಚ್ಚರಿಸಿದ್ದಾರೆ.
ಇದನ್ನೂ ಓದಿ: ರಾಜ್ಯದಲ್ಲಿ 2ನೇ ಡೋಸ್ ವ್ಯಾಕ್ಸಿನ್ ಕೊರತೆ: ಸರ್ಕಾರಕ್ಕೆ ಹೈಕೋರ್ಟ್ ತರಾಟೆ