ಮೈಸೂರು: ನಿನ್ನೆ ರಾತ್ರಿ ನಡೆದ ಮದುವೆ ಪಾರ್ಟಿಯೊಂದರಲ್ಲಿ ಯುವಕನೊಬ್ಬನಿಂದ ಹಲ್ಲೆಗೊಳಗಾಗಿದ ಶಾಸಕ ತನ್ವೀರ್ ಸೇಠ್ ಅವರಿಗೆ ಖಾಸಗಿ ಆಸ್ಪತ್ರೆಯ ತೀವ್ರ ನಿಗಾ ಘಟಕದಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ.
24 ಗಂಟೆ ತೀವ್ರ ನಿಗಾ ಘಟಕದಲ್ಲಿ ತನ್ವೀರ್ ಸೇಠ್
ಕಳೆದ ರಾತ್ರಿ 11.30ಕ್ಕೆ ಘಟನೆ ನಡೆದ ತಕ್ಷಣ ಪಕ್ಕದಲ್ಲೇ ಇದ್ದ ಕೊಲಂಬಿಯಾ ಏಷಿಯಾ ಆಸ್ಪತ್ರೆಗೆ ತನ್ವೀರ್ ಅವರನ್ನು ಕರೆದುಕೊಂಡು ಬಂದು ಚಿಕಿತ್ಸೆ ನೀಡಲಾಗಿದೆ. ಕತ್ತಿನ ನರ ಕಟ್ ಆದ ಕಾರಣ ಆ ಭಾಗದಲ್ಲಿ ಆಪರೇಷನ್ ಸಹ ಮಾಡಲಾಗಿದ್ದು, ಅವರನ್ನು 24 ಗಂಟೆಗಳ ಕಾಲ ತುರ್ತು ಚಿಕಿತ್ಸಾ ಘಟಕದಲ್ಲಿ ಇರಿಸಲಾಗಿದೆ. ಸದ್ಯದಲ್ಲಿ ಅವರ ಸ್ಥಿತಿ ಸ್ವಲ್ಪ ಗಂಭೀರವಾಗಿದೆ ಎನ್ನಲಾಗಿದೆ.
ಆಸ್ಪತ್ರೆಗೆ ನಗರ ಪೊಲೀಸ್ ಕಮಿಷನರ್ ಕೆ.ಟಿ. ಬಾಲಕೃಷ್ಣ ಆಗಮಿಸಿದ್ದು ಘಟನೆ ಬಗ್ಗೆ ತನಿಖೆ ನಡೆಯುತ್ತಿದೆ ಎಂದರು. ಅಲ್ಲದೆ ಆಸ್ಪತ್ರೆಗೆ ಮಾಜಿ ಸಚಿವ ಯು.ಟಿ. ಖಾದರ್ ಆಗಮಿಸಿದ್ದು ಆರೋಗ್ಯ ವಿಚಾರಿಸಿ ಆಸ್ಪತ್ರೆಯಲ್ಲೇ ಇದ್ದಾರೆ. ಘಟನೆ ತಿಳಿದು ಆಸ್ಪತ್ರೆ ಮುಂದೆ ತನ್ವೀರ್ ಅಭಿಮಾನಿಗಳು ಆಗಮಿಸುತ್ತಿದ್ದು ಹೊರಗಡೆ ಕಾಯುತ್ತಾ ಇದ್ದಾರೆ.
ನಿನ್ನೆ ರಾತ್ರಿ ಸಂಬಂಧಿಕರ ಮದುವೆ ಪಾರ್ಟಿಯಲ್ಲಿ ಸಂಗೀತ ಕಾರ್ಯಕ್ರಮವನ್ನು ವೀಕ್ಷಿಸುತ್ತಿದ್ದ ಮಾಜಿ ಮಂತ್ರಿ ಹಾಗೂ ಎನ್.ಆರ್. ಕ್ಷೇತ್ರದ ಶಾಸಕ ತನ್ವೀರ್ ಸೇಠ್ ಮೇಲೆ ವ್ಯಕ್ತಿಯೊಬ್ಬ ಮಚ್ಚಿನಿಂದ ಹಲ್ಲೆ ಮಾಡಿ ಪರಾರಿಯಾಗಿದ್ದ. ಆ ವ್ಯಕ್ತಿಯನ್ನು ಬಳಿಕ ಚೇಸ್ ಮಾಡಿ ಹಿಡಿದ ಸ್ಥಳೀಯರು, ಎನ್. ಆರ್ ಪೊಲೀಸ್ ಠಾಣೆಗೆ ಒಪ್ಪಿಸಿದ್ದಾರೆ. ಆರೋಪಿಯನ್ನು ಅದೇ ಕ್ಷೇತ್ರ ವ್ಯಾಪ್ತಿಯ ಗೌಸಿಯ ನಗರದ ಫರಾನ್ ಪಾಷ ಎಂದು ಗುರುತಿಸಲಾಗಿದೆ. ಈ ಸಂಬಂಧ ಎನ್.ಆರ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿಕೊಂಡು, ಆರೋಪಿಯನ್ನು ವಿಚಾರಣೆಗೆ ಒಳಪಡಿಸಲಾಗಿದೆ.