ಮೈಸೂರು: ಒಂದು ವಾರದೊಳಗೆ ಎಲ್ಲಾ ಆಂಗ್ಲ ಭಾಷೆಯ ನಾಮಫಲಕಗಳನ್ನು ತೆರವುಗೊಳಿಸಿ, ಕನ್ನಡ ನಾಮಫಲಕಗಳನ್ನು ತರಬೇಕು ಎಂದು ಕನ್ನಡ ಅಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಟಿ ಎಸ್ ನಾಗಾಭರಣ ತಿಳಿಸಿದರು. ಕನ್ನಡ ಅಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷರಾದ ಟಿ.ಎಸ್.ನಾಗಾಭರಣ ಅಧ್ಯಕ್ಷತೆಯಲ್ಲಿ ಜಿಲ್ಲಾಧಿಕಾರಿಗಳ ಕಚೇರಿಯ ಸಭಾಂಗಣದಲ್ಲಿ ಮಂಗಳವಾರ ಬೆಳಗ್ಗೆ ಕನ್ನಡ ಅನುಷ್ಠಾನ ಜನ ಪ್ರಗತಿ ಪರಿಶೀಲನಾ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.
ಕನ್ನಡ ಭಾಷೆ ಅನುಷ್ಠಾನ ಸಂಬಂಧ ಎಲ್ಲಾ ಇಲಾಖೆಗಳ ಅಧಿಕಾರಿಗಳಲ್ಲಿ ಮಾಹಿತಿ ಪಡೆದು ಬಳಿಕ ಮಾತನಾಡಿದ ಅವರು, ಮೈಸೂರು ನಗರದಲ್ಲಿ ರಾರಾಜಿಸುತ್ತಿರುವ ಆಂಗ್ಲ ಫಲಕಗಳನ್ನು ತೆರವು ಮಾಡುವಂತೆ ಪ್ರಾಧಿಕಾರಕ್ಕೆ ಹೆಚ್ಚಿನ ದೂರುಗಳು ಬಂದಿದೆ. ಈ ಹಿನ್ನೆಲೆ ವಾರದೊಳಗೆ ಎಲ್ಲಾ ಆಂಗ್ಲ ಭಾಷೆಯ ನಾಮಫಲಕಗಳನ್ನು ತೆರವುಗೊಳಿಸುವಂತೆ ತಾಕೀತು ಮಾಡಿದರು.
ಈಗಾಗಲೇ ಜಿಲ್ಲಾ ಜಾಗೃತಿ ಸಮಿತಿ 174 ಆಂಗ್ಲಭಾಷೆಯಲ್ಲಿರುವ ನಾಮಫಲಕಗಳನ್ನು ತೆರವುಗೊಳಿಸುವಂತೆ ವರದಿ ನೀಡಿದೆ. ಆದರೆ ಅಧಿಕಾರಿಗಳು ಈವರೆಗೂ ಯಾಗೆ ಕ್ರಮ ಕೈಗೊಂಡಿಲ್ಲ ಎಂದು ಪ್ರಶ್ನಿಸಿದರು. ಕನ್ನಡ ಮತ್ತು ಇಂಗ್ಲಿಷ್ ಭಾಷೆಯಲ್ಲಿದ್ದರೆ ತೊಂದರೆ ಇಲ್ಲ. ಏಕ ಭಾಷೆಯಲ್ಲಿರುವ ನಾಮಫಲಕಗಳನ್ನು ತೆರವು ಮಾಡಲೇಬೇಕು. ಮೈಸೂರಿನಲ್ಲಿ ಕನ್ನಡ ಭವನ ನಿರ್ಮಾಣದ ಅವಶ್ಯವಿದೆ ಎಂದು ಜಿಲಾ ಜಾಗೃತಿ ಸಮಿತಿ ಸದಸ್ಯರು ಗಮನಕ್ಕೆ ತಂದರು. ಮುಡಾದಿಂದ ನಿವೇಶನ ಪಡೆಯಲು ಚರ್ಚಿಸುವುದು, ಭವನ ನಿರ್ಮಾಣಕ್ಕೆ ಅನುದಾನಕ್ಕೆ ಪ್ರಯತ್ನಿಸುವ ಬಗ್ಗೆ ಚರ್ಚಿಸಲಾಯಿತು. ಜನಸಾಮಾನ್ಯರಿಗೆ ಸರ್ಕಾರದ ವೆಬ್ಸೈಟ್ಗಳಲ್ಲಿ ಎಲ್ಲಾ ವಿಷಯ ತಿಳಿಯಬೇಕು ಎಂಬ ಕಾರಣಕ್ಕಾಗಿ ಕರ್ನಾಟಕದ ಎಲ್ಲಾ ವೆಬ್ಸೈಟ್ಗಳು ಕನ್ನಡದಲ್ಲಿ ಒಂದೇ ಮಾದರಿಯಲ್ಲಿ ಇರಬೇಕು. ಇಲಾಖೆಗಳಿಂದ ನೀಡುವ ಜಾಹೀರಾತುಗಳನ್ನು ಕಡ್ಡಾಯವಾಗಿ ಕನ್ನಡದಲ್ಲಿ ನೀಡಬೇಕು ಎಂದು ತಿಳಿಸಿದರು.
ಚಾಮುಂಡಿ ಬೆಟ್ಟದಲ್ಲಿ ಎಲ್ಲಾ ಪ್ರಚಾರ ಪದಕಗಳು ಕನ್ನಡದಲ್ಲಿಯೇ ಇವೆ ಎಂದು ಅಧಿಕಾರಿಗಳು ತಿಳಿಸಿದರು.
(ಇದನ್ನೂ ಓದಿ: ಅಂದು ವಿರೋಧ ಪಕ್ಷದಲ್ಲಿದ್ದ ಬೊಮ್ಮಾಯಿ ಏನ್ ಕಡ್ಲೆ ಪುರಿ ತಿನ್ನುತ್ತಿದ್ರಾ: ಸಿದ್ದರಾಮಯ್ಯ ಪ್ರಶ್ನೆ)