ಮೈಸೂರು: ವಿಧಾನ ಪರಿಷತ್ ಸದಸ್ಯ ಸಂದೇಶ್ ನಾಗರಾಜ್ ಅವರು ಹೆಚ್.ಡಿ.ದೇವೇಗೌಡರು ಹಾಗೂ ರೇವಣ್ಣಗೆ ಧನ್ಯವಾದ ಅರ್ಪಿಸಿರುವುದಕ್ಕೆ ಮೈಸೂರಿನ ಖಾಸಗಿ ಹೋಟೆಲ್ನಲ್ಲಿ ಮಾಜಿ ಮುಖ್ಯಮಂತ್ರಿ ಹೆಚ್.ಡಿ.ಕುಮಾರಸ್ವಾಮಿ ಪ್ರತಿಕ್ರಿಯಿಸಿದ್ದಾರೆ.
12 ವರ್ಷಗಳ ಕಾಲ ಸಂದೇಶ್ ನಾಗರಾಜ್ಗೆ ಹೆಚ್.ಡಿ.ದೇವೇಗೌಡರು ಹಾಗೂ ರೇವಣ್ಣ ಅವರೇ ಬೆಂಬಲ ನೀಡಿದ್ದಾರೆ. ಹಾಗಾಗಿ ಅವರಿಗೆ ಧನ್ಯವಾದ ತಿಳಿಸಿದ್ದಾರೆ. ಈ ಬಗ್ಗೆ ಹೆಚ್ಚು ಮಾತು ಬೇಡ ಎಂದರು.
ಹಿನ್ನೆಲೆ ಏನು?:
ಜೆಡಿಎಸ್ ತೊರೆದು ಬಿಜೆಪಿಗೆ ಸೇರುವುದಾಗಿ ಹೇಳಿದ್ದ ಸಂದೇಶ್ ನಾಗರಾಜ್, ತಾವು ಈ ಬಾರಿ ವಿಧಾನ ಪರಿಷತ್ ಚುನಾವಣೆಗೆ (Karnataka legislative council Election) ಸ್ಪರ್ಧಿಸುವುದಿಲ್ಲ ಎಂದು ಸ್ಪಷ್ಟಪಡಿಸಿದ್ದಾರೆ. ಈ ಬಗ್ಗೆ ಪ್ರಕಟಣೆ ಹೊರಡಿಸಿರುವ ಅವರು, ಈ ಬಾರಿಯ ಚುನಾವಣೆಯಲ್ಲಿ ಬಿಜೆಪಿಯಿಂದ ಸ್ಪರ್ಧಿಸುವ ಇಚ್ಛೆ ವ್ಯಕ್ತಪಡಿಸಿದ್ದೆ. ಆದರೆ, ಪಕ್ಷದ ನಿಯಮದಂತೆ ವಯೋಮಿತಿಯ ಕಾರಣಕ್ಕೆ ಟಿಕೆಟ್ ಕೈ ತಪ್ಪಿದೆ. ನನಗೆ ಟಿಕೆಟ್ ನೀಡಲು ಶ್ರಮಿಸಿದ ಎಲ್ಲರಿಗೂ ವಂದಿಸುತ್ತೇನೆ ಎಂದು ತಿಳಿಸಿದ್ದರು. ಹೆಚ್.ಡಿ.ದೇವೇಗೌಡರು ಹಾಗೂ ರೇವಣ್ಣಗೂ ಧನ್ಯವಾದ ಸಮರ್ಪಿಸಿದ್ದರು.
ಇನ್ನು, ನಮ್ಮ ಸಾಮರ್ಥ್ಯಕ್ಕನುಸಾರವಾಗಿ ಏಳು ಕ್ಷೇತ್ರಗಳಲ್ಲಿ ಸ್ಪರ್ಧೆ ಮಾಡುತ್ತೇವೆ. ಎಲ್ಲೆಲ್ಲಿ ಗೆಲುವಿಗೆ ಅವಕಾಶವಿದೆಯೋ ಅಲ್ಲಲ್ಲಿ ಸ್ಪರ್ಧೆ ಮಾಡುತ್ತಿದ್ದೇವೆ. ಸ್ಪರ್ಧೆ ಮಾಡದ ಕ್ಷೇತ್ರಗಳಲ್ಲಿ ಸ್ಥಳೀಯ ನಾಯಕರು ಪರಿಸ್ಥಿತಿಗೆ ಅನುಗುಣವಾಗಿ ಮುಂದಿನ ತೀರ್ಮಾನ ಮಾಡುತ್ತಾರೆ. ನನ್ನ ಗುರಿ ಇರೋದು ಮುಂದಿನ ವಿಧಾನಸಭಾ ಚುನಾವಣೆ ಮೇಲೆ. 123 ಕ್ಷೇತ್ರಗಳನ್ನ ಗೆದ್ದು ಅಧಿಕಾರ ಹಿಡಿಯಬೇಕಿದೆ. ಕಳೆದ ಬಾರಿಗಿಂತ ಈ ಬಾರಿ ಹೆಚ್ಚು ವಿಧಾನ ಪರಿಷತ್ ಕ್ಷೇತ್ರಗಳಲ್ಲಿ ಗೆಲ್ಲುವ ವಿಶ್ವಾಸವನ್ನು ವ್ಯಕ್ತಪಡಿಸಿದರು.
ಇದನ್ನೂ ಓದಿ: 'ಎಂಎಲ್ಸಿ ಚುನಾವಣೆಗೆ ಸ್ಪರ್ಧಿಸುವುದಿಲ್ಲ': ಸಂದೇಶ್ ನಾಗರಾಜ್ ಘೋಷಣೆ
ನಮ್ಮ ಶಂಖವನ್ನು ನಾನೇ ಊದಬೇಕು. ಹೀಗಾಗಿ ಎಲ್ಲ ಕ್ಷೇತ್ರಗಳಲ್ಲಿಯೂ ನಾನೇ ಪ್ರಚಾರ ಮಾಡುತ್ತೇನೆ ಎಂದು ಹೇಳುವ ಮೂಲಕ ಸಚಿವ ಈಶ್ವರಪ್ಪ ಹೇಳಿಕೆಗೆ ಟಾಂಗ್ ಕೊಟ್ಟರು. ನಮಗೆ ಕಾರ್ಯಕರ್ತರೇ ಶಕ್ತಿ, ಕಾರ್ಯಕರ್ತರಿಗೇನೆ ನಾಯಕನನ್ನು ಹುಟ್ಟುಹಾಕುವ ಸಾಮರ್ಥ್ಯ ಇರುವುದು. ಹೀಗಾಗಿ ಬಂಡಾಯ ಏಳುವ ಶಾಸಕರ ಬಗ್ಗೆ ಹೆಚ್ಚು ತಲೆಕೆಡಿಸಿಕೊಳ್ಳುವುದಿಲ್ಲ. ಪರ್ಯಾಯ ನಾಯಕರನ್ನು ಕಾರ್ಯಕರ್ತರೇ ಹುಡುಕಿಕೊಂಡಿದ್ದಾರೆ. ಚುನಾವಣೆ ಎದುರಿಸಲು ಮಾನಸಿಕವಾಗಿ ಸಿದ್ಧರಿದ್ದೇವೆ ಎಂದು ತಿಳಿಸಿದರು.