ಮೈಸೂರು: ಆನೆ ಹೋಗುತ್ತೆ, ನಾಯಿ ಬೊಗಳುತ್ತದೆ. ಅದರಿಂದ ಏನೂ ಆಗಲ್ಲ. ಸಿದ್ದರಾಮಯ್ಯ ವಿರುದ್ಧ ಶುಕ್ರವಾರ ಘೋಷಣೆ ಕೂಗಿ ಪ್ರತಿಭಟನೆ ಮಾಡಿದವರ ವಿರುದ್ಧ ಮಾಜಿ ಸಚಿವ ಡಾ. ಹೆಚ್.ಸಿ. ಮಹದೇವಪ್ಪ ಹೀಗೆ ಖಾರವಾಗಿ ಪ್ರತಿಕ್ರಿಯೆ ನೀಡಿದ್ದಾರೆ.
ನಗರದಲ್ಲಿ ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ಸ್ವಾತಂತ್ರ್ಯ ಸಂಗ್ರಾಮದಲ್ಲಿ ಮಹಾನ್ ನಾಯಕರ ವಿರುದ್ಧ ದೂಷಣೆ ಮಾಡಿದ್ದರು. ಆದರೆ ಅವರ ಹೆಸರುಗಳೇನು ಚರಿತ್ರೆಯಲ್ಲಿ ಹಾಳಾಯ್ತಾ..? ಆ ಮಹಾನ್ ನಾಯಕರ ವರ್ಚಸ್ಸಿಗೆ ಧಕ್ಕೆಯಾಯಿತೆ? ಇದು ಹಾಗೆಯೇ.. ಸಿದ್ದರಾಮಯ್ಯ ವಿರುದ್ಧ ಘೋಷಣೆ ಕೂಗುವುದರಿಂದ ಏನೂ ಆಗಲ್ಲ. ಆನೆ ಹೋಗುತ್ತಲೆ ಇರುತ್ತೆ, ನಾಯಿ ಬೊಗಳುತ್ತಲೇ ಇರುತ್ತೆ ಎಂದು ಸಿದ್ದರಾಮಯ್ಯ ಪರ ಬ್ಯಾಟಿಂಗ್ ಮಾಡಿದರು.
ಸಿದ್ದರಾಮಯ್ಯ ಒಬ್ಬ ಶ್ರೇಷ್ಠ ನಾಯಕ, ಅವರ ವಿರುದ್ಧ ಘೋಷಣೆ ಕೂಗಿದ್ದು ಸ್ಥಳೀಯ ಸಂಘಟನೆಗೆ ಆರೋಗ್ಯಕರವಲ್ಲ. ಇದರಿಂದ ಪಕ್ಷಕ್ಕೆ ಮುಜುಗರವಾಗಲಿದೆ. ಅಲ್ಲದೆ, ಘೋಷಣೆ ಕೂಗಿದ ವ್ಯಕ್ತಿಗಳ ವಿರುದ್ಧ ಶಾಸಕ ತನ್ವಿರ್ ಸೇಠ್ ಮತ್ತು ಕೆಪಿಸಿಸಿ ಅಧ್ಯಕ್ಷರು ತೀರ್ಮಾನ ಕೈಗೊಳ್ಳುತ್ತಾರೆ. ಮೇಯರ್ ಆಯ್ಕೆ ವಿಚಾರದಲ್ಲಿ ತನ್ವೀರ್ ಸೇಠ್ ಅವರಿಗೆ ಪಕ್ಷದ ಅಧ್ಯಕ್ಷರು ವರದಿ ಕೇಳಲಿದ್ದಾರೆ ಎಂದು ಹೇಳಿದರು.