ಮೈಸೂರು: ಉಪಚುನಾವಣೆ ನಡೆಯುವ ಎರಡೂ ಕ್ಷೇತ್ರಗಳಲ್ಲೂ ಎರಡೆರಡು ದಿನ ಪ್ರಚಾರ ಕೈಗೊಳ್ಳುತ್ತೇವೆ. ಈ ಎರಡು ಉಪ ಚುನಾವಣೆಗಳನ್ನು ಗೆಲ್ಲುವ ವಿಶ್ವಾಸವಿದೆ ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ವಿಶ್ವಾಸ ವ್ಯಕ್ತಪಡಿಸಿದರು.
ರಾತ್ರಿ ದಸರಾ ದೀಪಾಲಂಕಾರ ವೀಕ್ಷಣೆ ಮಾಡಿದ ನಂತರ ಮೈಸೂರಿನಲ್ಲೇ ವಾಸ್ತವ್ಯ ಹೂಡಿದ್ದ ಸಿಎಂ ಬಸವರಾಜ ಬೊಮ್ಮಾಯಿ ಇಂದು ಮಾಧ್ಯಮಗಳ ಜೊತೆ ಮಾತನಾಡಿ, ದಸರಾ ಯಶಸ್ವಿಯಾಗಿ ನಡೆಯಲು ಸಹಕರಿಸಿದ ಎಲ್ಲ ಜನತೆಗೂ ಅಭಿನಂದನೆ ಸಲ್ಲಿಸಿದರು. ಮುಂದಿನ ವರ್ಷ ಇನ್ನೂ ಯಶಸ್ವಿಯಾಗಿ ದಸರಾ ಆಚರಿಸೋಣ. ಮೈಸೂರನ್ನು ಪ್ರವಾಸೋದ್ಯಮ ಸರ್ಕ್ಯೂಟ್ ಆಗಿ ಅಭಿವೃದ್ಧಿ ಪಡಿಸುವ ಬಗ್ಗೆ ಯೋಜನೆ ರೂಪಿಸುವುದಾಗಿ ತಿಳಿಸಿದರು. ವಸ್ತು ಪ್ರದರ್ಶನ ಆವರಣದಲ್ಲಿ ಶಾಶ್ವತವಾಗಿ ವರ್ಷಪೂರ್ತಿ ಎಕ್ಸಿಬಿಷನ್ ನಡೆಯುವ ರೀತಿ ಯೋಜನೆ ರೂಪಿಸುವುದಾಗಿ ತಿಳಿಸಿದರು.
ಒಟ್ಟು ನಾಲ್ಕು ದಿನ ಪ್ರಚಾರ:
ಉಪಚುನಾವಣೆಯಲ್ಲಿ ನಾವೇ ಗೆಲ್ಲುವ ವಿಶ್ವಾಸವಿದ್ದು, ಒಟ್ಟು ನಾಲ್ಕು ದಿನ ಪ್ರಚಾರ ಮಾಡುತ್ತೇವೆ. ಎರಡು ಕ್ಷೇತ್ರಗಳಲ್ಲೂ ಎರಡೆರಡು ದಿನ ಪ್ರಚಾರಕ್ಕೆ ಹೋಗುತ್ತೇನೆಂದು ತಿಳಿಸಿದರು.
ನಾಳೆಯಿಂದ ಉಪಚುನಾವಣೆ ಪ್ರಚಾರ:
ನಾಳೆಯಿಂದ ನಾಲ್ಕು ದಿನಗಳ ಕಾಲ ಉಪಚುನಾವಣೆ ಪ್ರಚಾರಕ್ಕೆ ಹೋಗುತ್ತೇನೆ ಎಂದು ಸಿಎಂ ತಿಳಿಸಿದರು. ಮೈಸೂರಿನ ಖಾಸಗಿ ಹೋಟೆಲ್ನಲ್ಲಿ ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ಎರಡು ದಿನ ಹಾನಗಲ್, ಎರಡು ದಿನ ಸಿಂದಗಿಯಲ್ಲಿ ಪ್ರಚಾರ ಮಾಡುತ್ತೇನೆ. ಎರಡು ಕ್ಷೇತ್ರಗಳಲ್ಲಿ ನಮ್ಮ ಪಕ್ಷದ ಅಭ್ಯರ್ಥಿಗಳು ಗೆಲ್ಲುತ್ತಾರೆ ಎಂದು ಭವಿಷ್ಯ ನುಡಿದರು.
ಮೈಸೂರಿನ ಜನತೆಗೆ ವಿಶೇಷ ಅಭಿನಂದನೆ:
ಈ ಬಾರಿಯ ದಸರಾ ಅತ್ಯಂತ ಯಶಸ್ವಿಯಾಗಿ ಮುಕ್ತಾಯವಾಗಿದೆ. ಮುಂದಿನ ವರ್ಷ ಅದ್ಧೂರಿಯಾಗಿ ದಸರಾ ನಡೆಸುತ್ತೇವೆ. ಈ ಬಾರಿ ನಾಡಹಬ್ಬಕ್ಕೆ ಸಹಕರಿಸಿದ ಮೈಸೂರಿನ ಜನತೆಗೆ ವಿಶೇಷ ಧನ್ಯವಾದ ಎಂದರು.
ಇದನ್ನೂ ಓದಿ: ಮೈಸೂರು ದಸರಾ ದೀಪಾಲಂಕಾರ ಕಣ್ತುಂಬಿಕೊಂಡ ಸಿಎಂ ಫ್ಯಾಮಿಲಿ