ಮೈಸೂರು: ನಮ್ಮದು ಕೃಷಿ ಆಧಾರಿತ ದೇಶ. ಶೇ.90ರಷ್ಟು ಸಣ್ಣ, ಮಧ್ಯಮ ಕೃಷಿಕರಿದ್ದಾರೆ. ಅತಿ ಹೆಚ್ಚು ಹಣ್ಣು-ತರಕಾರಿಗಳನ್ನು ಬೆಳೆಯುತ್ತಿದ್ದೇವೆ. ಮುಂದಿನ ಎರಡು ವರ್ಷಗಳಲ್ಲಿ ರಸಗೊಬ್ಬರ ವಿಚಾರದಲ್ಲಿಯೂ ಸ್ವಾವಲಂಬಿಗಳಾಗುವುದು ನಮ್ಮ ಗುರಿ ಎಂದು ಕೇಂದ್ರ ಸಚಿವೆ ಶೋಭಾ ಕರಂದ್ಲಾಜೆ ಹೇಳಿದ್ದಾರೆ.
ಮೈಸೂರಿನಲ್ಲಿ ಸುದ್ದಿಗೋಷ್ಟಿ ನಡೆಸಿ ಮಾತನಾಡಿದ ಅವರು, ಜಿಡಿಪಿಯಲ್ಲಿ ಕೃಷಿಯ ಪಾಲು ಶೇ. 22.5ರಷ್ಟಿದೆ. ಕೃಷಿ ಉತ್ಪನ್ನಗಳ ಪೈಕಿ ಭಾರತ 10ನೇ ಸ್ಥಾನದೊಳಗೆ ಬರಬೇಕೆಂಬುದು ನಮ್ಮ ಗುರಿ. ಈ ಬಾರಿ 9ನೇ ಸ್ಥಾನಕ್ಕೆ ಬಂದು ನಿಲ್ಲುವ ವಿಶ್ವಾಸವಿದೆ. ಅದಕ್ಕಾಗಿ ರೈತರಿಗೆ ಗುಣಮಟ್ಟದ ಬೀಜಗಳನ್ನು ನೀಡಲು ವಿಶೇಷ ಕಾನೂನನ್ನು ತರುತ್ತಿದ್ದೇವೆ ಎಂದರು.
ಶೇ.70ರಷ್ಟು ಅಡುಗೆ ಎಣ್ಣೆಯನ್ನು ವಿದೇಶದಿಂದ ಆಮದು ಮಾಡಿಕೊಳ್ಳಲಾಗುತ್ತಿದೆ. ಮಲೇಶಿಯಾ ಹಾಗೂ ಇಂಡೋನೇಶಿಯಾದಿಂದ ಪಾಮ್ ಆಯಿಲ್ ಬರುತ್ತದೆ. ಅದನ್ನು ಭಾರತದಲ್ಲಿ ರಿಫೈನರಿ ಮಾಡಿ ಬೇರೆ ಬೇರೆ ಲೇಬಲ್ಗಳನ್ನು ಅಂಟಿಸಿ ಮಾರಾಟ ಮಾಡಲಾಗುತ್ತಿದೆ. ಮುಂದಿನ ದಿನಗಳಲ್ಲಿ ಖಾದ್ಯ ತೈಲದ ವಿಚಾರದಲ್ಲಿ ಸ್ವಾವಲಂಬನೆ ಸಾಧಿಸಬೇಕಿದೆ ಎಂದು ಹೇಳಿದರು.
ಇದನ್ನೂ ಓದಿ: ಕರ್ನಾಟಕದ ಮೂರು ಜಿಲ್ಲೆಗಳ ಕಬ್ಬಿಣದ ಅದಿರು ಸಾಗಿಸಲು ಸುಪ್ರೀಂ ಗ್ರೀನ್ ಸಿಗ್ನಿಲ್
ಇದೇ ವೇಳೆ, ದಕ್ಷಿಣ ಪದವೀಧರ ಕ್ಷೇತ್ರದ ವಿಧಾನ ಪರಿಷತ್ ಚುನಾವಣೆ ಹಿನ್ನೆಲೆಯಲ್ಲಿ ಮೈ.ವಿ.ರವಿಶಂಕರ್ ಪರ ಮತಯಾಚನೆ ಮಾಡಿದರು. ಕಳೆದ ಬಾರಿ ರವಿಶಂಕರ್ ಕಡಿಮೆ ಅಂತರದಲ್ಲಿ ಸೋತಿದ್ದಾರೆ. ಈ ಬಾರಿ ಗೆಲ್ಲಿಸಬೇಕು ಎಂದು ಮನವಿ ಮಾಡಿದರು.