ಮೈಸೂರು: ಆಕ್ಸಿಜನ್ ಏಜೆನ್ಸಿಯ ಕಳ್ಳಾಟ ತಡೆಯಲು ಟಾಸ್ಕ್ ಪೋರ್ಸ್ ಸಮಿತಿಯಿಂದ ಸಿಸಿಟಿವಿಯನ್ನು ಹಾಕಲಾಗುತ್ತಿದ್ದು, ಅದರ ಕಂಟ್ರೋಲ್ ಮೊಬೈಲಿನಲ್ಲೇ ಮಾಡಬಹುದಾಗಿದೆ ಎಂದು ಸಂಸದ ಪ್ರತಾಪ್ ಸಿಂಹ ಮಾಧ್ಯಮಗಳಿಗೆ ಮಾಹಿತಿ ನೀಡಿದರು.
ಈಗ ಆಕ್ಸಿಜನ್ ಸಮಸ್ಯೆ ಎಲ್ಲಾ ಕಡೆ ಇದ್ದು, ಇದರಿಂದ ಆಕ್ಸಿಜನ್ ಏಜೆನ್ಸಿಗಳಿಗೆ ಬೇಡಿಕೆ ಹೆಚ್ಚಾಗಿದೆ. ಹಾಗಾಗಿ ಹೆಚ್ಚಿನ ದರಕ್ಕೆ ಆಕ್ಸಿಜನ್ ಸಿಲಿಂಡರುಗಳನ್ನು ಖಾಸಗಿ ಆಸ್ಪತ್ರೆಗಳಿಗೆ ಮಾರಾಟ ಮಾಡುತ್ತಿದ್ದಾರೆ ಎಂಬ ದೂರು ಕೇಳಿಬರುತ್ತಿದೆ. ಈ ಹಿನ್ನೆಲೆಯಲ್ಲಿ ಸರ್ಕಾರಿ ಆಸ್ಪತ್ರೆಗಳಿಗೆ ಆಕ್ಸಿಜನ್ ಕೊರತೆ ಉಂಟಾಗುತ್ತಿದೆ ಎಂದರು.
ಇದನ್ನು ಸರಿಪಡಿಸಲು 8 ಖಾಸಗಿ ಆಕ್ಸಿಜನ್ ಏಜೆನ್ಸಿಗಳ ಕಚೇರಿಗಳಿಗೆ ಸಿಸಿಟಿವಿ ಕ್ಯಾಮರಾ ಅಳವಡಿಸಿ ಅದನ್ನು ನೋಡಿಕೊಳ್ಳಲು ಒಬ್ಬ ಕೆ.ಎ.ಎಸ್ ಅಧಿಕಾರಿಯನ್ನು ನೇಮಕ ಮಾಡಲಾಗಿದೆ. ಯಾವ ಆಸ್ಪತ್ರೆಗೆ ಎಷ್ಟು ಆಕ್ಸಿಜನ್ ಹೋಗಿದೆ, ಮೈಸೂರಿನ 102 ಖಾಸಗಿ ಮಾತ್ತು ಸರ್ಕಾರಿ ಆಸ್ಪತ್ರೆಗಳಿಗೆ ಯಾವ ರೀತಿ ಆಕ್ಸಿಜನ್ ಸಪ್ಲೈ ಆಗುತ್ತಿದೆ ಎಂಬುದನ್ನು ಈ ನೋಡಲ್ ಅಧಿಕಾರಿ ನೋಡಿಕೊಳ್ಳುತ್ತಾರೆ.
ಒಟ್ಟಾರೆ ಆಕ್ಸಿಜನ್ ಪೂರೈಕೆಯಲ್ಲಿ ಏಜೆನ್ಸಿಯವರು ಕೃತಕ ಅಭಾವ ಸೃಷ್ಟಿಸುವುದು, ಹೆಚ್ಚಿನ ಬೆಲೆಗೆ ಆಕ್ಸಿಜನ್ ಮಾರಾಟ ಮಾಡುವುದು ಇತರ ಚಟುವಟಿಕೆ ಮೇಲೆ ಕಣ್ಣಿಡಲು ಸಿಸಿಟಿವಿ ಕಣ್ಗಾವಲು ಸಹಾಯವಾಗಲಿದೆ ಎಂದು ಸಂಸದರು ಹೇಳಿದರು.