ಮೈಸೂರು: ನೂತನ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರಿಂದಲೂ ಒಳ್ಳೆಯ ಆಡಳಿತ ಕೊಡಲು ಸಾಧ್ಯವಿಲ್ಲ. ರಾಜ್ಯದ ಆರ್ಥಿಕ ಪರಿಸ್ಥಿತಿ ತತ್ತರಿಸಿ ಹೋಗಿದೆ ಎಂದು ಕೆಪಿಸಿಸಿ ಕಾರ್ಯಾಧ್ಯಕ್ಷ ಆರ್.ಧ್ರುವನಾರಾಯಣ್ ಹೇಳಿದರು.
ಜಲದರ್ಶಿನಿ ಅತಿಥಿಗೃಹದಲ್ಲಿ ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ರಾಜ್ಯದ ಆರ್ಥಿಕ ಪರಿಸ್ಥಿತಿ ತತ್ತರಿಸಿ ಹೋಗಿದೆ. ಬೊಮ್ಮಾಯಿ ಅವರಿಂದಲೂ ಒಳ್ಳೆಯ ಆಡಳಿತ ಕೊಡಲು ಸಾಧ್ಯವಿಲ್ಲ. ಬಸವರಾಜ ಬೊಮ್ಮಾಯಿ ಸಿಎಂ ಆಗಿ ಅಧಿಕಾರವನ್ನು ಪೂರ್ಣಗೊಳಿಸುತ್ತಾರೆಯೇ ಎಂಬುದನ್ನು ಕಾಲವೇ ನಿರ್ಣಯಿಸಲಿದೆ. ಅಲ್ಲದೆ, ಅವರಿಗೆ ಸ್ವತಂತ್ರವಾಗಿ ಅಧಿಕಾರ ನಡೆಸಲು ಅವಕಾಶ ಇರುತ್ತದೆಯಾ ಎಂಬುದನ್ನು ಕಾದು ನೋಡಬೇಕಿದೆ ಎಂದರು.
ಬಿ.ಎಸ್. ಯಡಿಯೂರಪ್ಪ ಅವರಿಗೆ ಸುವರ್ಣ ಅವಕಾಶ ಸಿಕ್ಕಿತ್ತು. ಆದರೆ, ಅವರು ಆಡಳಿತ ಕೊಡುವಲ್ಲಿ ಸಂಪೂರ್ಣ ವಿಫಲರಾಗಿದ್ದಾರೆ. ಕುಟುಂಬದವರ ಹಸ್ತಕ್ಷೇಪದಿಂದ ಭ್ರಷ್ಟಾಚಾರ ಆರೋಪ ಬಂತು. ರಾಜೀನಾಮೆ ಕೊಡುವಾಗ ಅವರು ಕಣ್ಣೀರು ಹಾಕಿದ್ದು, ಅದನ್ನು ನಾವು ದುರ್ಬಳಕೆ ಮಾಡಿಕೊಳ್ಳಲ್ಲ ಎಂದು ತಿಳಿಸಿದರು.
ವಾಜಪೇಯಿ ಪ್ರಧಾನಿಯಾಗಿದ್ದಾಗ ಸರ್ವ ಶಿಕ್ಷಣ ಅಭಿಯಾನ, ರಾಷ್ಟ್ರೀಯ ಹೆದ್ದಾರಿ, ಸೇರಿದಂತೆ ಹಲವಾರು ಯೋಜನೆಗಳನ್ನು ಜಾರಿಗೆ ತಂದರು. ಅವರ ಕಾರ್ಯವೈಖರಿ ಮೆಚ್ಚುತ್ತೇವೆ. ಆದರೆ, ಪ್ರಧಾನಿ ಮೋದಿಯವರ ಅಚ್ಛೇ ದಿನ್ ಬರುತ್ತೆ ಅಂದರು. ಬಂತಾ? ಎಂದು ಪ್ರಶ್ನಿಸಿದರು.
ಇದನ್ನೂ ಓದಿ: ಎಲ್ಲರನ್ನು ವಿಶ್ವಾಸಕ್ಕೆ ಪಡೆದು, ಸವಾಲುಗಳನ್ನು ಮೆಟ್ಟಿಲಾಗಿ ಮಾಡಿಕೊಳ್ಳುತ್ತೇನೆ: ಬೊಮ್ಮಾಯಿ