ಮೈಸೂರು: ಭಾರಿ ಗಾಳಿ ಮಳೆಗೆ ಬೃಹತ್ ಮರವೊಂದು ಚಲಿಸುತ್ತಿದ್ದ ಆಟೋ ಮೇಲೆ ಬಿದ್ದು, ಆಟೋ ಚಾಲಕ ಸ್ಥಳದಲ್ಲೇ ಸಾವನ್ನಪ್ಪಿರುವ ಘಟನೆ ಮೈಸೂರು-ಬೆಂಗಳೂರು ರಸ್ತೆಯ ಫೈವ್‌ಲೈಟ್ ವೃತ್ತದ ಬಳಿ ನಡೆದಿದೆ.
ಬನ್ನಿಮಂಪಟದ ಹಲೀಂ ನಗರದ ನಿವಾಸಿ ಏಜಾಜ್ ಪಾಷ (42) ಮೃತಪಟ್ಟ ಆಟೋ ಚಾಲಕ. ರಿಕ್ಷಾದಲ್ಲಿದ್ದ ಪ್ರಯಾಣಿಕನಿಗೆ ಸಣ್ಣ ಪುಟ್ಟ ಗಾಯಗಳಾಗಿದ್ದು, ಪ್ರಾಣಾಪಾಯದಿಂದ ಪಾರಾಗಿದ್ದಾನೆ.
ನಗರದಲ್ಲಿ ಧಾರಕಾರ ಮಳೆ ಸುರಿಯುತ್ತಿದ್ದಾಗ, ಚರ್ಚ್ ಕಡೆಯಿಂದ ಫೈವ್‌ಲೈಟ್ ವೃತ್ತದ ಕಡೆ ಪ್ರಯಾಣಿನಿಕನೊಂದಿಗೆ ಏಜಾಜ್ ಪಾಷ ಆಟೋದಲ್ಲಿ ಬರುತ್ತಿದ್ದಾಗ ಭಾರಿ ಗಾತ್ರದ ಮರವೊಂದು ಬುಡ ಸಮೇತ ಬಿದ್ದಿದೆ. ಇದರಿಂದ ಆಟೋದಲ್ಲಿದ್ದ ಚಾಲಕ ಸ್ಥಳದಲ್ಲಿಯೇ ಮೃತಪಟ್ಟಿದ್ದಾನೆ. ಪ್ರಯಾಣಿಕನಿಗೆ ಸಣ್ಣ ಪುಟ್ಟ ಗಾಯವಾಗಿದ್ದು, ಚಿಕಿತ್ಸೆಗಾಗಿ ಆಸ್ಪತ್ರೆಗೆ ದಾಖಲಿಸಲಾಗಿದೆ.
ಸ್ಥಳಕ್ಕೆ ಆಗಮಿಸಿದ ಪೊಲೀಸರು ಆಟೋ ಮೇಲೆ ಬಿದ್ದ ಮರವನ್ನು ತೆರವುಗೊಳಿಸಿ ಆಟೋ ಕೆಳಗೆ ಸಿಕ್ಕಿಕೊಂಡಿದ್ದ ಮೃತ ಚಾಲಕನ ದೇಹವನ್ನು ಸಾರ್ವಜನಿಕರ ಸಹಾಯದೊಂದಿಗೆ ಹೊರ ತೆಗೆದಿದ್ದಾರೆ. ಈ ಸಂಬಂಧ ಲಷ್ಕರ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.