ಮೈಸೂರು : ಪಕ್ಷ ವಿರೋಧಿ ಚಟುವಟಿಕೆಗಳನ್ನು ಮಾಡಿರುವವರ ವಿರುದ್ಧ ರಾಷ್ಟ್ರ ಹಾಗೂ ರಾಜ್ಯದ ನಾಯಕರು ಶೀಘ್ರದಲ್ಲೇ ಕ್ರಮಕೈಗೊಳ್ಳಲಿದ್ದಾರೆ ಎಂದು ಶಾಸಕ ಸಾ ರಾ ಮಹೇಶ್ ಪರೋಕ್ಷವಾಗಿ ಶಾಸಕ ಜಿ ಟಿ ದೇವೇಗೌಡರಿಗೆ ಟಾಂಗ್ ನೀಡಿದರು.
ನಗರದಲ್ಲಿಂದು ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಅವರು, ಗ್ರಾಮ ಪಂಚಾಯತ್, ತಾಲೂಕು ಪಂಚಾಯತ್, ನಗರ ಸಭೆ, ಜಿಲ್ಲಾ ಪಂಚಾಯತ್‌ನಲ್ಲಿ ನಮ್ಮ ಪಕ್ಷದ ಪರವಾಗಿ ಕೆಲಸ ಮಾಡಿಲ್ಲ ಎನ್ನುವುದು ಅಲ್ಲ. ನಮ್ಮ ಪಕ್ಷದ ವಿರುದ್ಧ ಕೆಲಸ ಮಾಡಿದ್ದಾರೆ. ಈ ಬಗ್ಗೆ ನಾಯಕರು ಸದ್ಯದಲ್ಲೇ ತೀರ್ಮಾನ ಮಾಡಲಿದ್ದಾರೆ ಎಂದು ಹೇಳಿದರು.
ಪಕ್ಷದ ಅಭ್ಯರ್ಥಿ ವರಿಷ್ಠರಾದ ಹೆಚ್.ಡಿ.ದೇವೇಗೌಡರು, ಹೆಚ್.ಡಿ. ಕುಮಾರಸ್ವಾಮಿ ಅವರನ್ನು ಭೇಟಿ ಮಾಡಿ ಅಭಿನಂದನೆ ಸಲ್ಲಿಸಲು ಹೋಗುತ್ತಾರೆ. ಈ ವೇಳೆ ಪರಿಷತ್ ಚುನಾವಣೆ ಸಂದರ್ಭದಲ್ಲಿ ಆಗಿರುವ ಎಲ್ಲಾ ಬೆಳವಣಿಗೆಗಳ ಬಗ್ಗೆ ವರದಿ ನೀಡುತ್ತಾರೆ. ನಂತರ ಹಿರಿಯ ನಾಯಕರು ತೀರ್ಮಾನಿಸುತ್ತಾರೆ ಎಂದು ತಿಳಿಸಿದರು.
ವೈಯಕ್ತಿಕವಾಗಿ ಜಿ.ಟಿ.ದೇವೇಗೌಡರನ್ನು ಓಲೈಸುತ್ತಿದ್ದೀರಾ ಎಂಬ ಪ್ರಶ್ನೆಗೆ ಉತ್ತರಿಸಿದ ಸಾ.ರಾ.ಮಹೇಶ್, ನಮ್ಮ ನಾಯಕರು ಎಂದು ಒಪ್ಪಿಕೊಂಡಿದ್ದೆವು. ಹಾಗಾಗಿ, ಇನ್ನಾದರೂ ಬದಲಾಗುತ್ತಾರೆ ಎಂದು ಹೇಳುತ್ತಿದ್ದೇನೆ.
ಸಿ.ಎನ್.ಮಂಜೇಗೌಡ ಅವರು ಕಾಂಗ್ರೆಸ್‌ನಲ್ಲಿ ಸೀಟ್ ಕೇಳಿದ್ದರು, ಅವರ ಮನಸ್ಸು ಬದಲಾಯಿಸಿ ಜೆಡಿಎಸ್‌ನಲ್ಲಿ ಕೇಳಿದರು, ಬೇರೆ ಯಾರಿಗೆ ಕೊಟ್ಟರು ನಾನು ಕೆಲಸ ಮಾಡುತ್ತೇನೆ ಎಂದು ಹೇಳಿದರು. ಕೊನೆಯಲ್ಲಿ ನಮ್ಮೆಲ್ಲಾ ಆಕಾಂಕ್ಷಿಗಳು ಸೇರಿ ತೀರ್ಮಾನ ಮಾಡಿ ಮಂಜೇಗೌಡರು ಸೂಕ್ತ ಅಭ್ಯರ್ಥಿ ಎಂದು ತೀರ್ಮಾನ ಮಾಡಿದರು.
15 ದಿನದಲ್ಲಿ ಕೆಲಸ ಮಾಡಿ ಎಲ್ಲರೂ ಶಿಸ್ತಿನ ಸಿಪಾಯಿಯಂತೆ ಗೆಲ್ಲಿಸಿಕೊಟ್ಟಿದ್ದಾರೆ. ಈ ತರಹ ಅವರ ಮನಸ್ಸು ಬದಲಾವಣೆ ಆಗಬಹುದು ಎಂದು ಕಾದು ನೋಡುತ್ತಿದ್ದೇವೆ ಎಂದು ತಿಳಿಸಿದರು. ಜೆಡಿಎಸ್ ಪಕ್ಷ ನಮಗೆ ಮುಖ್ಯವೇ ಹೊರತು, ನಾವು ಪಕ್ಷಕ್ಕೆ ಮುಖ್ಯವಲ್ಲ ಎಂಬುದು ಮತ್ತೊಮ್ಮೆ ಸಾಬೀತಾಗಿದೆ ಎಂದ ಸಾ.ರಾ.ಮಹೇಶ್, ಅರಿಶಿಣ, ಕುಂಕುಮ, ಕವರ್ ಕೊಟ್ಟಿದ್ದಾರೆ. ಆಣೆ ಹಾಕಿಸಿಕೊಂಡಿದ್ದಾರೆ ಎಂದು ಆರೋಪಿಸಿದರು.
2023ರ ಚುನಾವಣೆಯಲ್ಲೂ ಇದೇ ಫಲಿತಾಂಶ : ರಾಷ್ಟ್ರೀಯ ಪಕ್ಷದವರು ಏನೇ ಕಷ್ಟಪಟ್ಟರು ಬಿಜೆಪಿ 11 ಕ್ಷೇತ್ರ ಹಾಗೂ ಕಾಂಗ್ರೆಸ್ 11 ಕ್ಷೇತ್ರ ಗೆದ್ದಿವೆ. ಜೆಡಿಎಸ್ 6 ಅಭ್ಯರ್ಥಿಗಳನ್ನು ಹಾಕಿ 2 ಕ್ಷೇತ್ರ ಗೆದ್ದಿದೆ. ಬಹುಮತಕ್ಕೆ ನಾವು ಯಾರಿಗೆ ಸಪೋರ್ಟ್ ಮಾಡುತ್ತೇವೆ ಅವರಿಗೆ ತಾನೇ ಅಂತೆಯೇ ಮುಂದಿನ 2023ನೇ ಚುನಾವಣೆಯಲ್ಲೂ ಇದೇ ರಿಸಲ್ಟ್‌ನಲ್ಲಿ ಫಲಿತಾಂಶ ಇರಲಿದೆ ಎಂದರು.
ಮುಂದಿನ ಚುನಾವಣೆಯಲ್ಲಿ ಮೈತ್ರಿ ಬಗ್ಗೆ ವರಿಷ್ಠರ ತೀರ್ಮಾನ : ಹೆಚ್.ಡಿ.ದೇವೇಗೌಡರು, ಹೆಚ್.ಡಿ.ಕುಮಾರಸ್ವಾಮಿ ಅವರು ಚರ್ಚೆ ಮಾಡಿ 2023ರ ಚುನಾವಣೆಯಲ್ಲಿ ಎರಡು ರಾಷ್ಟ್ರೀಯ ಪಕ್ಷಗಳಿಂದ ಅಂತರ ಕಾಯ್ದುಕೊಳ್ಳಬೇಕಾ ಅಥವಾ ಯಾರ ಜೊತೆ ಸಖ್ಯವನ್ನು ಬೆಳೆಸಬೇಕು ಎಂದು ನಿರ್ದಿಷ್ಟವಾಗಿ ತೀರ್ಮಾನ ಮಾಡುತ್ತಾರೆ.
ವೈಯಕ್ತಿಕವಾಗಿ ಎರಡು ರಾಷ್ಟ್ರೀಯ ಪಕ್ಷಗಳು ಕೂಡ ನಮ್ಮ ಜೊತೆ ಚೆನ್ನಾಗಿ ಇದ್ದುಕೊಂಡು, ನಮ್ಮನ್ನು ಮುಗಿಸುವ ಪ್ರಯತ್ನ ಮಾಡುತ್ತಾರೆ. ಇಬ್ಬರಿಂದಲೂ ಅಂತರ ಕಾಯ್ದುಕೊಳ್ಳುವುದು ಒಳ್ಳೆಯದು ಎಂದು ಹೇಳಿದರು. ಟಿಕೆಟ್ ಕೈ ತಪ್ಪಲು ಮೈಸೂರಿನ ಮಹಾರಾಜರು ಕಾರಣ ಎಂಬ ಸಂದೇಶ್ ನಾಗರಾಜ್ ಹೇಳಿಕೆಗೆ ಪ್ರತಿಕ್ರಿಯಿಸಿ, ನಾನೇ ಒಪ್ಪಿಕೊಂಡಿದ್ದೆ.
ಆದರೆ, ಅವರೇ ಹೇಳಿದ್ದರು ನಾನು ಮಾನಸಿಕವಾಗಿ ಜೆಡಿಎಸ್‌ನಿಂದ ದೂರವಾಗಿದ್ದೇನೆ. ತಾಂತ್ರಿಕವಾಗಿ ಇದ್ದೇನೆ. ಆದ್ದರಿಂದ ಬೇರೆ ಅಭ್ಯರ್ಥಿ ಹುಡುಕುವ ಕೆಲಸ ಮಾಡಿದೆವು. ಆದರೆ, ಅವರು 15 ದಿನ ಮುಂಚಿತವಾಗಿ ಬಂದಿದ್ದರೆ ಬೇರೆ ಪರಿಸ್ಥಿತಿ ಇರುತ್ತಿತ್ತು. ಆದರೆ, ಮಂಜೇಗೌಡರಿಗೆ ಹಿಂದೆ ಮಾತು ಕೊಟ್ಟು ವ್ಯಾತ್ಯಾಸವಾಗಿತ್ತು. ಹಾಗಾಗಿ, ಮಂಜೇಗೌಡರನ್ನು ಅಭ್ಯರ್ಥಿಯಾಗಿ ತೀರ್ಮಾನ ಮಾಡಿದರು. ಅವರಾಗಿ ಬಿಟ್ಟು ಹೋದರೇ ವಿನಃ ನಾವ್ಯಾರು ವಿರೋಧ ಮಾಡಿಲ್ಲ ಎಂದರು.
ಇದನ್ನೂ ಓದಿ: ಸಿಎಂ ಬಸವರಾಜ ಬೊಮ್ಮಾಯಿಗೆ ಟಾನಿಕ್ ನೀಡಿದ ಪರಿಷತ್ ಫಲಿತಾಂಶ