ಮೈಸೂರು: ಕೊರೊನಾ 2ನೇ ಅಲೆಯಲ್ಲಿ ಜನರಷ್ಟೇ ಅಲ್ಲ, ಪ್ರಾಣಿಗಳಿಗೂ ಸಂಕಷ್ಟ ತಪ್ಪಿಲ್ಲ. ಅದರಲ್ಲೂ ಪ್ರವಾಸಿಗರು ಬಾರದ ಕಾರಣ ಪ್ರಾಣಿ ಸಂಗ್ರಹಾಲಯಗಳು ಆರ್ಥಿಕ ಸಂಕಷ್ಟ ಎದುರಿಸುತ್ತಿವೆ. ಇದನ್ನು ಮನಗಂಡ ನಟ ದರ್ಶನ್ ಮೃಗಾಲಯದ ಪ್ರಾಣಿಗಳನ್ನು ದತ್ತು ಪಡೆಯುವಂತೆ ಸಾರ್ವಜನಿಕರಿಗೆ ಮನವಿ ಮಾಡಿದ್ದರು.
ಇದರ ಬೆನ್ನಲ್ಲೆ ಮೃಗಾಲಯದ ಪ್ರಾಣಿಗಳ ದತ್ತು ಸ್ವೀಕಾರದಿಂದ 3 ಕೋಟಿ ರೂ. ದೇಣಿಗೆ ಬಂದಿದೆ ಎಂದು ಕರ್ನಾಟಕ ಮೃಗಾಲಯ ಪ್ರಾಧಿಕಾರದ ಅಧ್ಯಕ್ಷ ಮಹದೇವಸ್ವಾಮಿ ತಿಳಿಸಿದ್ದಾರೆ.
ಮೃಗಾಲಯದ ಆವರಣದಲ್ಲಿ ಸುದ್ದಿಗೋಷ್ಠಿ ನಡೆಸಿ ವಿವರಣೆ ನೀಡಿದ ಅವರು, ಕೊರೊನಾ ಸಂಕಷ್ಟದಲ್ಲಿ ರಾಜ್ಯದ 9 ಮೃಗಾಲಯಗಳು ಸಂಕಷ್ಟಕ್ಕೆ ಸಿಲುಕಿದ್ದವು. ಈ ಸಂದರ್ಭದಲ್ಲಿ ನಟ ದರ್ಶನ್ ಮೃಗಾಲಯದ ಪ್ರಾಣಿಗಳನ್ನು ದತ್ತು ಪಡೆಯುವಂತೆ ಅಭಿಮಾನಿಗಳು ಹಾಗೂ ಪ್ರಾಣಿ ಪ್ರಿಯರಿಗೆ ಮನವಿ ಮಾಡಿದ್ದರು. ಈ ಮನವಿಗೆ ಸ್ಪಂದಿಸಿ ಹೆಚ್ಚಿನ ಜನರು ಪ್ರಾಣಿಗಳನ್ನು ದತ್ತು ಪಡೆದಿದ್ದಾರೆ. ದತ್ತು ಪಡೆದವರಿಗೆ ನಟ ದರ್ಶನ್ ಲಾಕ್‌ಡೌನ್ ಮುಗಿದ ನಂತರ ದತ್ತು ಸ್ವೀಕಾರದ ಪ್ರಮಾಣ ಪತ್ರ ನೀಡುತ್ತಾರೆ ಎಂದು ತಿಳಿಸಿದರು.
ಅನ್ಲಾಕ್ ಆಗಿರುವ ಜಿಲ್ಲೆಗಳ ಅಂದರೆ ಹಂಪಿ, ಗದಗ ಹಾಗೂ ಬೆಳಗಾವಿ ಮೃಗಾಲಯವನ್ನು ಈಗಾಗಲೇ ತೆರೆಯಲಾಗಿದೆ. ಲಾಕ್‌ಡೌನ್ ಮುಗಿದ ನಂತರ ಮೈಸೂರು ಹಾಗೂ ಬನ್ನೇರುಘಟ್ಟ ಸೇರಿದಂತೆ ರಾಜ್ಯದ ಇತರ ಮೃಗಾಲಯಗಳನ್ನು ತೆರೆಯಲು ಚಿಂತನೆ ನಡೆಸಲಾಗಿದೆ. 3ನೇ ಅಲೆ ಮಕ್ಕಳ ಮೇಲೆ ಹೆಚ್ಚು ಪರಿಣಾಮ ಬೀರುತ್ತದೆ ಎಂಬ ಮುಂಜಾಗ್ರತೆಯಾಗಿ ಮೃಗಾಲಯ ತೆರೆದ ನಂತರ ಎಲ್ಲಾ ರೀತಿಯ ಮುಂಜಾಗ್ರತಾ ಕ್ರಮಗಳನ್ನು ಕೈಗೊಳ್ಳಲಾಗುವುದು ಎಂದರು.
ಇನ್ನು, ಮೃಗಾಲಯದ ಪ್ರಾಣಿಗಳಿಗೆ ಕೋವಿಡ್ ಸೋಂಕು ತಗುಲದ ರೀತಿಯಲ್ಲಿ ಸಿಬ್ಬಂದಿಗೆ ಎಲ್ಲಾ ರೀತಿಯ ಕೋವಿಡ್ ಮುಂಜಾಗ್ರತಾ ಕ್ರಮಗಳನ್ನು ತೆಗೆದುಕೊಳ್ಳಲಾಗುತ್ತಿದೆ ಎಂದರು.
ದತ್ತು ಸ್ವೀಕರಿಸಿದ ನಟ, ನಟಿಯರು
ದರ್ಶನ್ ಮಾಡಿದ ಮನವಿಗೆ ಸ್ಪಂದಿಸಿ ನಟ ಉಪೇಂದ್ರ , ಪ್ರಜ್ವಲ್ ದೇವರಾಜ್, ನಟಿ ಅಮೂಲ್ಯ, ಮಾಲಾಶ್ರೀ, ಪ್ರಿಯಾಂಕಾ ಉಪೇಂದ್ರ ಸೇರಿದಂತೆ ಹಲವಾರು ನಟ, ನಟಿಯರು ಮೈಸೂರಿನ ಮೃಗಾಲಯದ ಪ್ರಾಣಿಗಳನ್ನು ದತ್ತು ಸ್ವೀಕಾರ ಮಾಡಿದ್ದಾರೆ ಎಂದರು.
ಇದನ್ನೂ ಓದಿ: ವಿವಿಧ ಸಮುದಾಯಗಳು ಪಡುತ್ತಿರುವ ಕಷ್ಟ ಸರ್ಕಾರದ ಕಣ್ಣಿಗೆ ಬಿದ್ದಿಲ್ಲ: ಸಿದ್ದರಾಮಯ್ಯ