ಮಂಗಳೂರು(ದಕ್ಷಿಣ ಕನ್ನಡ): ಅನ್ಯ ಧರ್ಮೀಯ ವ್ಯಕ್ತಿಯನ್ನು ಮದುವೆಯಾಗಿ ಮತಾಂತರವಾಗಿದ್ದ ಹಿಂದೂ ಮಹಿಳೆ ಪತಿಗಾಗಿ ಮಾಡುತ್ತಿದ್ದ ಹೋರಾಟಕ್ಕೆ ಕೊನೆಗೂ ನ್ಯಾಯ ಸಿಗದೆ ಪ್ರಕರಣಕ್ಕೆ ಅಂತ್ಯ ಹಾಡಲು ನಿರ್ಧರಿಸಿದ್ದಾರೆ.
ಕೇರಳ ಮೂಲದ ಆಸಿಯಾ ಮೂಲತಃ ಹಿಂದೂ ಧರ್ಮಕ್ಕೆ ಸೇರಿದವರಾಗಿದ್ದು, ಸುಳ್ಯದ ಇಬ್ರಾಹಿಂ ಕಲೀಲ್ ಕಟ್ಟೆಕಾರ್ ಎಂಬಾತನನ್ನು ಪ್ರೀತಿಸಿ ಮದುವೆಯಾಗಿದ್ದರು. ಮದುವೆಯಾದ ಬಳಿಕ ಯುವಕನ ಧರ್ಮಕ್ಕೆ ಮತಾಂತರವಾಗಿದ್ದರು. ಆದರೆ ಆ ಬಳಿಕ ಇಬ್ರಾಹಿಂ ಕಲೀಲ್ ನಾಪತ್ತೆಯಾಗಿ ಪತ್ನಿಯಿಂದ ದೂರವಾಗಿದ್ದ. ಆತನನ್ನು ಬಳಿಕ ಪತ್ತೆ ಹಚ್ಚಲಾಗಿದ್ದರೂ ಆತ ಆಸಿಯಾಳನ್ನು ಒಪ್ಪಿಕೊಳ್ಳಲು ತಯಾರಿರಲಿಲ್ಲ. ಇದಕ್ಕಾಗಿ ಆಸಿಯಾ ಪ್ರತಿಭಟನೆ ಮೂಲಕ ಹೋರಾಟವನ್ನು ಮಾಡಿದ್ದರು. ಆದರೆ ಇಬ್ರಾಹಿಂ ಕಲೀಲ್ ಯಾರ ಮಾತನ್ನು ಕೇಳದೆ ಆಸಿಯಾಳನ್ನು ಪತ್ನಿಯಾಗಿ ಒಪ್ಪಿಕೊಳ್ಳಲು ಸಿದ್ದರಿರಲಿಲ್ಲ. ಇದೀಗ ಅಸೀಯಾ ಪತಿಯಿಂದ ದೂರವಾಗಲು ಮುಂದಾಗಿದ್ದಾರೆ.
ಈ ಬಗ್ಗೆ ಮಂಗಳೂರಿನಲ್ಲಿ ಮಾತನಾಡಿದ ಆಸಿಯಾ, ನಾನು ಈ ಪ್ರಕರಣಕ್ಕೆ ಅಂತ್ಯ ಹಾಡಲು ನಿರ್ಧರಿಸಿದ್ದೇನೆ. ಈವರೆಗೆ ನಾನು ಅಸೀಯಾ ಇಬ್ರಾಹಿಂ ಕಟ್ಟೆಕಾರ್ ಎಂದು ಗುರುತಿಸುತ್ತಿದ್ದೆ. ಇನ್ನು ಕೇವಲ ಅಸೀಯಾ ಆಗಿರುತ್ತೇನೆ. ಆತನಿಗಾಗಿ ಮಾಡಿದ ಹೋರಾಟ ಫಲಪ್ರದವಾಗಲಿಲ್ಲ. ಆತನಿಗೆ ಇಷ್ಟವಿಲ್ಲದಿದ್ದರೆ ಆತನೇ ನನ್ನಲ್ಲಿ ಬಂದು ಬೇಡ ಎಂದು ಹೇಳಬೇಕೆಂದು ಬಯಸಿದ್ದೆ. ಇತ್ತೀಚೆಗೆ ಆತನನ್ನು ನನ್ನ ಬಳಿ ಕರೆದುಕೊಂಡು ಬಂದಿದ್ದರು. ಈ ವೇಳೆ ಆತ ನನ್ನನ್ನು ಬೇಡ ಎಂದು ತಿಳಿಸಿದ್ದಾನೆ. ಆದರೆ ಮುಂದೆ ನನ್ನ ಜೀವನ ಇದರಿಂದ ಹಾಳಾಗುವುದು ಬೇಡ ಎಂದು ಈ ಪ್ರಕರಣಕ್ಕೆ ಅಂತ್ಯ ಹಾಡಲು ನಿರ್ಧರಿಸಿದ್ದೇನೆ ಎಂದು ಹೇಳಿದ್ದಾರೆ.
ನಮ್ಮ ಪ್ರಕರಣ ಇತ್ಯರ್ಥಗೊಳಿಸಲು ಹಿಂದೂ ಸಂಘಟನೆಯ ಶರಣ್ ಪಂಪ್ ವೆಲ್, ಗುರುಪುರ ಸ್ವಾಮೀಜಿ, ಮುಸ್ಲಿಂ ಮುಖಂಡರುಗಳು ಪ್ರಯತ್ನಪಟ್ಟರು. ಆದರೆ ಯಾರ ಪ್ರಯತ್ನವು ಸಫಲವಾಗಿಲ್ಲ. ಸ್ವಲ್ಪ ಸಮಯ ಸುಳ್ಯದಲ್ಲಿ ಇದ್ದು, ಮುಂದೆ ನನ್ನ ದಾರಿ ನೋಡಿಕೊಳ್ಳುತ್ತೇನೆ. ನನ್ನ ತವರು ಮನೆಯವರು ಮತ್ತೆ ಹಿಂದೂ ಧರ್ಮಕ್ಕೆ ಹೋದರೆ ಸೇರಿಸಿಕೊಳ್ಳಲು ತಯಾರಿದ್ದಾರೆ. ಆದರೆ ನಾನು ಮುಸ್ಲಿಂ ಧರ್ಮದಲ್ಲಿ ಇರುತ್ತೇನೆ. ಘರ್ ವಾಪ್ಸಿ ಆಗುವುದಿಲ್ಲ ಎಂದು ಸ್ಪಷ್ಟಪಡಿಸಿದ್ದಾರೆ.