ಮಂಗಳೂರು: ದಕ್ಷಿಣ ಕನ್ನಡ ಜಿಲ್ಲೆಯ ಬಂಟ್ವಾಳ ತಾಲೂಕಿನ ವಿಟ್ಲದ ದರ್ಬೆ ರಸ್ತೆಯಿಂದ ಬಾಲಕಿಯನ್ನು ಅಪಹರಿಸಿ, ಅತ್ಯಾಚಾರ ಮಾಡಿದ ಪ್ರಕರಣದಲ್ಲಿ ಅಪರಾಧ ಸಾಬೀತಾಗಿದ್ದು ಸೆ. 27 ರಂದು ಶಿಕ್ಷೆ ಪ್ರಮಾಣ ಪ್ರಕಟಿಸುವ ಸಾಧ್ಯತೆ ಇದೆ.
ಮಂಗಳೂರಿನ ಹೆಚ್ಚುವರಿ ಸತ್ರ ನ್ಯಾಯಾಲಯ ಎಫ್ಟಿಎಸ್ಸಿ-1 (ಪೋಕ್ಸೋ) ನ್ಯಾಯಾಧೀಶೆ ಸಾವಿತ್ರಿ ವಿ.ಭಟ್ ಅವರು ಪ್ರಕರಣದ ವಾದ ವಿವಾದ ಆಲಿಸಿ ಆರೋಪಿಯ ಅಪರಾಧ ಸಾಬೀತಾಗಿದೆ ಎಂದು ತೀರ್ಪು ನೀಡಿದ್ದಾರೆ
ಬಂಟ್ವಾಳ ತಾಲೂಕಿನ ವಿಟ್ಲ ಕಸ್ಬಾ ಉಕ್ಕುಡದ ಬಾಲಕೃಷ್ಣ (25) ಆರೋಪಿ. ಈತ 2019ರ ಜುಲೈ 25ರಂದು ಬೆಳಗ್ಗೆ ಪರಿಚಿತ ಬಾಲಕಿ ಶಾಲೆಗೆ ನಡೆದುಕೊಂಡು ಹೋಗುವ ವೇಳೆ ಸ್ನೇಹಿತ ಪರಶುರಾಮನ ಬೈಕ್ನಲ್ಲಿ ಆತನ ಸಹಕಾರದೊಂದಿಗೆ ಅಪಹರಿಸಿದ. ಬಳಿಕ ಆಕೆಯನ್ನು ಬಿ.ಸಿ.ರೋಡ್ ವರೆಗೆ ಬೈಕ್ನಲ್ಲಿ ಕರೆದೊಯ್ದು ಬಳಿಕ ಬಸ್ನಲ್ಲಿ ಮೂಡುಬಿದಿರೆ ನೆಲ್ಲಿಕಾರು ಗ್ರಾಮದಲ್ಲಿರುವ ಸಂಬಂಧಿಕರ ಮನೆಗೆ ಕರೆದೊಯ್ದಿದ್ದ.
ಅಲ್ಲಿ ಬಾಲಕಿ ಮದುವೆಯಾಗುವುದಾಗಿ ನಂಬಿಸಿ ಅತ್ಯಾಚಾರ ಎಸಗಿದ್ದ. ಆ ಬಳಿಕ ಬಾಲಕಿಯನ್ನು ಈತ ಬೆಂಗಳೂರಿಗೆ ಕರೆದೊಯ್ದಿದ್ದ. ಮಗಳು ನಾಪತ್ತೆಯಾದ ಬಗ್ಗೆ ಆಕೆಯ ತಾಯಿ ವಿಟ್ಲ ಪೊಲೀಸರಿಗೆ ದೂರು ನೀಡಿದ್ದರು. ಇದೇ ವೇಳೆ, ಬೆಂಗಳೂರಿನಲ್ಲಿ ಆರೋಪಿ ಮತ್ತು ಬಾಲಕಿಯನ್ನು ಕಂಡ ಪೊಲೀಸರು ಸಂಶಯಗೊಂಡು ವಿಚಾರಿಸಿದಾಗ ಅದು ವಿಟ್ಲ ಠಾಣೆಗೆ ಸಂಬಂಧಿಸಿದ ಪ್ರಕರಣ ಎನ್ನುವುದು ಬೆಳಕಿಗೆ ಬಂದಿದ್ದು, ಅವರನ್ನು ವಿಟ್ಲ ಠಾಣಾ ಪೊಲೀಸರಿಗೆ ಒಪ್ಪಿಸಿದ್ದರು.
ಅತ್ಯಾಚಾರ ಮತ್ತು ಅಪಹರಣ ಪ್ರಕರಣ ದಾಖಲಿಸಿಕೊಂಡ ಅಂದಿನ ಬಂಟ್ವಾಳ ವೃತ್ತ ನಿರೀಕ್ಷಕ ಟಿ.ಡಿ ನಾಗರಾಜ್ ಅವರು ತನಿಖೆ ನಡೆಸಿ ನ್ಯಾಯಾಲಯಕ್ಕೆ ದೋಷಾರೋಪಣಾ ಪಟ್ಟಿ ಸಲ್ಲಿಸಿದ್ದರು. ಅಪಹರಣಕ್ಕೆ ಸಹಕರಿಸಿದ ಆರೋಪದಲ್ಲಿ ಪರಶುರಾಮನ ವಿರುದ್ಧವೂ ಪ್ರಕರಣ ದಾಖಲಾಗಿದ್ದು, ನ್ಯಾಯಾಲಯದಲ್ಲಿ 18 ಮಂದಿ ಸಾಕ್ಷಿದಾರರನ್ನು ವಿಚಾರಿಸಿ, ತೀರ್ಪು ಪ್ರಕಟಿಸಲಾಗಿದೆ.
ಆರೋಪಿಗೆ ಸೆ. 27 ರಂದು ಶಿಕ್ಷೆ ಪ್ರಮಾಣ ಪ್ರಕಟಿಸುವ ಸಾಧ್ಯತೆ ಇದೆ. ಪ್ರಾಸಿಕ್ಯೂಷನ್ ಪರವಾಗಿ ವಿಶೇಷ ಸರ್ಕಾರಿ ಅಭಿಯೋಜಕ (ಪೋಕ್ಸೋ) ವೆಂಕಟರಮಣ ಸ್ವಾಮಿ.ಸಿ ವಾದಿಸಿದ್ದರು.