ಮಂಗಳೂರು: ಅನಾರೋಗ್ಯ ಪೀಡಿತರನ್ನು ಆಸ್ಪತ್ರೆಗೆ ಕರೆದುಕೊಂಡು ಹೋಗಲು, ಮೆಡಿಕಲ್, ಆಹಾರ ಸಾಮಗ್ರಿಗಳು, ತುರ್ತು ಪರಿಸ್ಥಿತಿ, ಬಡವರಿಗೆ, ಕಾರ್ಮಿಕರಿಗೆ ಊಟದ ವ್ಯವಸ್ಥೆಗೆ ಸಂಬಂಧಿಸಿದಂತೆ ಪರಿಹಾರ ಒದಗಿಸಲು ರಾಜ್ಯ ಬಿಜೆಪಿ ಸಹಾಯವಾಣಿ ಆರಂಭಿಸಿದೆ. ಬಿಜೆಪಿ ರಾಜ್ಯಾಧ್ಯಕ್ಷ ನಳಿನ್ ಕುಮಾರ್ ಕಟೀಲ್ ಸಹಾಯವಾಣಿಯನ್ನು ಅನಾವರಣಗೊಳಿಸಿದರು.
ರಾಜ್ಯ ಬಿಜೆಪಿ ಸಹಾಯವಾಣಿ ರಾಜ್ಯದೆಲ್ಲೆಡೆ ಇಂದಿನಿಂದ ಆರಂಭವಾಗಲಿದೆ. ರಾಜ್ಯದ ಎಲ್ಲಾ ಜಿಲ್ಲೆಗಳು, ವಾರ್ಡ್, ಬೂತ್ಗಳ ಮತದಾರರು, ಕಾರ್ಯಕರ್ತರು 080-68324040 (ಸಹಾಯವಾಣಿ) ಮತ್ತು 8722557733 (ವಾಟ್ಸ್ಆ್ಯಪ್ ಸಂಖ್ಯೆ) ಮತ್ತು ಫೇಸ್ಬುಕ್ (BJPKARSMIDCELL) ಹಾಗೂ ಟ್ವಿಟರ್ ಮೂಲಕ ಸಂಪರ್ಕಿಸಬಹುದು.
ಎಲ್ಲಿಂದ ಕರೆಗಳು ಬರುತ್ತವೆಯೋ ಅಲ್ಲಿನ ಮಂಡಲ, ವಿಭಾಗಗಳಿಗೆ ತಿಳಿಸಲಾಗುವುದು. ಅಲ್ಲಿನ ಕಾರ್ಯಕರ್ತರು, ಕರೆ ಬಂದವರ ಸಮಸ್ಯೆ ಆಲಿಸಿ ಪರಿಹರಿಸಿಕೊಡುತ್ತಾರೆ. ಪ್ರತಿದಿನ ರಾತ್ರಿ 9 ಗಂಟೆಗೆ ಸಭೆ ಸೇರಿ ಎಷ್ಟು ದೂರು ದಾಖಲಾಗಿವೆ, ಎಷ್ಟು ದೂರಿಗೆ ಪರಿಹಾರ ದೊರಕಿದೆ, ಬಾಕಿ ಉಳಿದಿರುವ ದೂರುಗಳೆಷ್ಟು ಎಂದು ಚರ್ಚೆ ನಡೆಸಲಾಗುವುದು ಎಂದು ಕಟೀಲ್ ತಿಳಿಸಿದರು.
ಲಾಕ್ಡೌನ್ನಿಂದ ಜನರು ಸಂಕಷ್ಟಕ್ಕೆ ಒಳಗಾಗಬಾರದು. ಅಲ್ಲಲ್ಲಿ ವಾರ್ ರೂಂಗಳನ್ನು ಈಗಾಗಲೇ ತೆರೆಯಲಾಗಿದೆ. ಬಿಜೆಪಿ ರಾಷ್ಟ್ರೀಯ ಅಧ್ಯಕ್ಷರ ಸೂಚನೆ ಮೇರೆಗೆ ಪ್ರತಿಯೊಬ್ಬ ಕಾರ್ಯಕರ್ತನೂ ಐವರು ಬಡವರು, ನಿರ್ಗತಿಕರು ಮತ್ತು ಕೂಲಿ ಕಾರ್ಮಿಕರಿಗೆ ಊಟ ಒದಗಿಸಬೇಕು ಎಂದು ಸೂಚನೆ ನೀಡಿದ್ದಾರೆ ಎಂದರು.
ರಾಜ್ಯದಲ್ಲಿ ಈವರೆಗೂ 2,01,398 ಆಹಾರ ಪೊಟ್ಟಣ ಒದಗಿಸಲಾಗಿದೆ. ಅದಲ್ಲದೆ 1,96,150 ಮಾಸ್ಕ್ ವಿತರಿಸಲಾಗಿದೆ. ಪ್ರಧಾನಮಂತ್ರಿ ಕೇರ್ಸ್ ನಿಧಿಗೆ ರಾಜ್ಯದಲ್ಲಿ ಈವರೆಗೆ 1,68,031 ಕಾರ್ಯಕರ್ತರು ಪೂರ್ತಿಯಾಗಿ ಭಾಗವಹಿಸಿದ್ದಾರೆ. 5,95,705 ಬಡವರು, ಕೂಲಿ ಕಾರ್ಮಿಕರಿಗೆ, ಆಹಾರ ಸಾಮಾಗ್ರಿಗಳ ಕಿಟ್ಗಳನ್ನು ಒದಗಿಸಲಾಗಿದೆ ಎಂದು ಹೇಳಿದರು.